ಮಹಿಳೆಯರ ಏಶ್ಯ ಕಪ್: ಕೊರಿಯಾ ವಿರುದ್ಧ ಭಾರತಕ್ಕೆ ಜಯ

PC : NDTV
ಹಾಂಗ್ಝೌ, ಸೆ.10: ದಕ್ಷಿಣ ಕೊರಿಯಾ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಮಹಿಳಾ ಹಾಕಿ ತಂಡವು ಏಶ್ಯಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ಶುಭಾರಂಭ ಮಾಡಿದೆ. ಮಾತ್ರವಲ್ಲ ಪಂದ್ಯಾವಳಿಯಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿದೆ.
ಭಾರತದ ಪರ ವೈಷ್ಣವಿ ಫಾಲ್ಕೆ, ಸಂಗೀತಾ ಕುಮಾರಿ, ಲಾಲ್ರೆಂಸಿಯಾಮಿ ಹಾಗೂ ಋತುಜಾ ಪಿಸಾಲ್ ತಲಾ ಒಂದು ಗೋಲು ಗಳಿಸಿದರು. ಕಿಮ್ ಯುಜಿನ್ ಕೊರಿಯಾದ ಪರ ಪೆನಾಲ್ಟಿ ಕಾರ್ನರ್ ನಲ್ಲಿ ಅವಳಿ ಗೋಲುಗಳನ್ನು ಗಳಿಸಿದರು.
ಪಂದ್ಯದ 2ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಗಳಿಸಿದ ವೈಷ್ಣವಿ ಫಾಲ್ಕೆ ಅವರು ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.
ಭಾರತ ತಂಡವು ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಪಡೆದಿತ್ತು. 33ನೇ ನಿಮಿಷದಲ್ಲಿ ಸಂಗೀತಾ ಕುಮಾರಿ ಗೋಲು ಗಳಿಸಿ ತಂಡದ ಮುನ್ನಡೆ ಹೆಚ್ಚಿಸಿದರು. ಒಂದು ನಿಮಿಷದ ನಂತರ ಕೊರಿಯಾದ ಕಿಮ್ ಯುಜಿನ್ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲು ಗಳಿಸಿ ತಿರುಗೇಟು ನೀಡಿದರು.
40ನೇ ನಿಮಿಷದಲ್ಲಿ ಗೋಲು ಗಳಿಸಿದ ಲಾಲ್ರೆಂಸಿಯಾಮಿ ಅವರು ಭಾರತಕ್ಕೆ 3-1 ಮುನ್ನಡೆ ಒದಗಿಸಿಕೊಟ್ಟರು.
ಕಿಮ್ ಯುಜಿನ್ 53ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಭಾರತಕ್ಕೆ ಒತ್ತಡ ಹೇರಲು ಯತ್ನಿಸಿದರು. 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಋತುಜಾ ಪಿಸಾಲ್ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಭಾರತ ತಂಡವು ಗುರುವಾರ ತನ್ನ ಎರಡನೇ ಸೂಪರ್-4 ಪಂದ್ಯದಲ್ಲಿ ಚೀನಾ ತಂಡವನ್ನು ಎದುರಿಸಲಿದೆ.







