ಮುಂದಿನ ವರ್ಷ ಏಶ್ಯದಲ್ಲಿ ಮಹಿಳೆಯರ ಫುಟ್ಬಾಲ್ ಚಾಂಪಿಯನ್ಸ್ ಲೀಗ್

ndtv
ಕೌಲಾಲಂಪುರ: ಏಶ್ಯನ್ ಮಹಿಳೆಯರ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯನ್ನು ಮುಂದಿನ ವರ್ಷ ಏರ್ಪಡಿಸಲಾಗುವುದು ಎಂದು ಏಶ್ಯನ್ ಫುಟ್ಬಾಲ್ ಕನ್ಫೆಡರೇಶನ್ (ಎಎಫ್ಸಿ) ರವಿವಾರ ಪ್ರಕಟಿಸಿದೆ. ಆದರೆ, ಅದು ಬಹುಮಾನ ಮೊತ್ತದ ವಿವರಗಳನ್ನು ಬಹಿರಂಗಪಡಿಸಿಲ್ಲ.
ಪಂದ್ಯಾವಳಿಯ ಪ್ರಾಥಮಿಕ ಸುತ್ತುಗಳು 2024 ಆಗಸ್ಟ್ನಲ್ಲಿ ಆರಂಭಗೊಳ್ಳುತ್ತವೆ. 12 ತಂಡಗಳನ್ನೊಳಗೊಂಡ ಗುಂಪು ಹಂತವು ಅಕ್ಟೋಬರ್ ನಲ್ಲಿ ಆರಂಭಗೊಳ್ಳುವುದು. ಈ ವಿಷಯವನ್ನು, ವಿಶ್ವಕಪ್ ಫೈನಲ್ಗೆ ಕೆಲವೇ ಗಂಟೆಗಳ ಮುನ್ನ ಸಿಡ್ನಿಯಲ್ಲಿ ನಡೆದ ತನ್ನ ಮಹಿಳಾ ಫುಟ್ಬಾಲ್ ಸಮಿತಿಯ ಸಭೆಯ ಬಳಿಕ ಎಎಫ್ಸಿ ಪ್ರಕಟಿಸಿದೆ.
ಕ್ವಾರ್ಟರ್ಫೈನಲ್ ಪಂದ್ಯಗಳು 2025 ಮಾರ್ಚ್ ನಲ್ಲಿ ನಡೆಯಲಿವೆ ಹಾಗೂ ಅದೇ ವರ್ಷದ ಮೇ ತಿಂಗಳಲ್ಲಿ ಫೈನಲ್ ಪಂದ್ಯವನ್ನು ನಡೆಸಲು ಯೋಜನೆ ರೂಪಿಸಲಾಗಿದೆ.
ಆದರೂ, ಈ ದಿನಾಂಕಗಳು ಪ್ರಾಯೋಗಿಕವಾಗಿವೆ ಹಾಗೂ ಅಗತ್ಯ ಬಿದ್ದರೆ ದಿನಾಂಕಗಳನ್ನು ಬದಲಾಯಿಸಬಹುದಾಗಿದೆ ಎಂದು ಎಎಫ್ಸಿ ಸ್ಪಷ್ಟಪಡಿಸಿದೆ.
ಮೊದಲ ನಾಲ್ಕು ಆವೃತ್ತಿಗಳಲ್ಲಿ, ತಲಾ ನಾಲ್ಕು ತಂಡಗಳನ್ನೊಳಗೊಂಡ ಮೂರು ಗುಂಪುಗಳಲ್ಲಿ 12 ತಂಡಗಳು ಸೆಣಸಲಿವೆ.
ಪಂದ್ಯಗಳನ್ನು ಪ್ರತಿ ಗುಂಪಿನಲ್ಲಿ ಸೆಂಟ್ರಲೈಸ್ಡ್ ಸಿಂಗಲ್ ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಾಗುವುದು. ಪ್ರತಿ ಗುಂಪಿನ ಎರಡು ಅಗ್ರ ತಂಡಗಳು ಮತ್ತು ಮೂರನೇ ಸ್ಥಾನವನ್ನು ಉತ್ತಮವಾಗಿ ಮುಗಿಸಿರುವ ಎರಡು ತಂಡಗಳು ಕ್ವಾರ್ಟರ್ಫೈನಲ್ ತಲುಪಲಿವೆ ಎಂದು ಎಎಫ್ಸಿಯ ಹೇಳಿಕೆಯೊಂದು ತಿಳಿಸಿದೆ.