Asian Games ಮಹಿಳಾ ಹಾಕಿ: ಭಾರತಕ್ಕೆ ಐತಿಹಾಸಿಕ ಚಿನ್ನ
44 ವರ್ಷಗಳ ಕಾಯುವಿಕೆಯ ಬಳಿಕ 2ನೇ ಸ್ವರ್ಣ

Photo Credit : PTI
ನಗೋಯ, ಅ. 2: ಏಶ್ಯನ್ ಗೇಮ್ಸ್ ನಲ್ಲಿ, ಶುಕ್ರವಾರ ಹಾಲಿ ಚಾಂಪಿಯನ್ ಚೀನಾ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿದ ಭಾರತೀಯ ಮಹಿಳಾ ಹಾಕಿ ತಂಡವು ಚಿನ್ನ ಗೆದ್ದಿದೆ. ಇದರೊಂದಿಗೆ, ಭಾರತೀಯ ಮಹಿಳೆಯರು ಹಾಕಿಯಲ್ಲಿ 44 ವರ್ಷಗಳ ಬಳಿಕ ಮೊದಲ ಏಶ್ಯನ್ ಗೇಮ್ಸ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಜೊತೆಗೆ, ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ನೇರ ಪ್ರವೇಶವನ್ನೂ ಪಡೆದುಕೊಂಡಿದೆ.
ಫೈನಲ್ ಪಂದ್ಯದ 10ನೇ ನಿಮಿಷದಲ್ಲಿ ಲಾಲ್ರೆಮ್ಸಿಯಾಮಿ ಅದ್ಭುತ ‘ಟೊಮಹಾಕ್’ ಹೊಡೆತದ ಮೂಲಕ ಭಾರತದ ಮೊದಲ ಗೋಲು ಬಾರಿಸಿದರು. ಅಂತಿಮವಾಗಿ ಇದು ಗೆಲುವಿನ ಗೋಲಾಗಿ ಪರಿಣಮಿಸಿತು.
ಬಳಿಕದ ಅವಧಿಯಲ್ಲಿ ಭಾರತೀಯ ಆಟಗಾರ್ತಿಯರು ಅಮೋಘ ರಕ್ಷಣಾತ್ಮಕ ಆಟ ಪ್ರದರ್ಶಿಸಿ ಚೀನಾದ ನಿರಂತರ ದಾಳಿಗಳನ್ನು ಹಿಮ್ಮೆಟ್ಟಿಸಿದರು. ಅನುಭವಿ ಗೋಲ್ ಕೀಪರ್ ಸವಿತಾ ಪುನಿಯಾ ಪೆನಾಲ್ಟಿ ಸ್ಟ್ರೋಕ್ ಒಂದನ್ನು ತಡೆದಿದ್ದು ಇದರಲ್ಲಿ ಪ್ರಮುಖವಾಗಿತ್ತು.
ಇದರೊಂದಿಗೆ, ಭಾರತವು 44 ವರ್ಷಗಳ ಸುದೀರ್ಘ ಅಂತರದ ಬಳಿಕ ತನ್ನ ಎರಡನೇ ಏಶ್ಯನ್ ಗೇಮ್ಸ್ ಚಿನ್ನ ಗೆದ್ದಿತು.
ಏಶ್ಯನ್ ಗೇಮ್ಸ್ನಲ್ಲಿ ಮಹಿಳಾ ಹಾಕಿ ಕ್ರೀಡೆ ಪರಿಚಯವಾದದ್ದು 1982ರಲ್ಲಿ. ಭಾರತ ಆ ವರ್ಷ, ಕೇವಲ ಒಂದು ಬಾರಿ ಚಿನ್ನ ಗೆದ್ದಿತ್ತು. ಅದಾದ ನಂತರ ಎರಡು ಬಾರಿ ಪ್ರಶಸ್ತಿಯ ಸನಿಹಕ್ಕೆ ಬಂದಿತ್ತಾದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. 1998 ಮತ್ತು 2018ರಲ್ಲಿ ಫೈನಲ್ ಗಳಲ್ಲಿ ಕ್ರಮವಾಗಿ ದಕ್ಷಿಣ ಕೊರಿಯ ಮತ್ತು ಜಪಾನ್ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಪ್ಯಾರಿಸ್ ಒಲಿಂಪಿಕ್ಸ್ನ ಬೆಳ್ಳಿ ಪದಕ ವಿಜೇತ ಚೀನಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯವನ್ನು ಶೂಟೌಟ್ನಲ್ಲಿ 4-2 ಅಂತರದಿಂದ ಸೋಲಿಸಿದ ಜಪಾನ್ ಕಂಚಿನ ಪದಕ ಗೆದ್ದಿತು.






