ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಆಗಿ ಮರಳಿದ ಶೋರ್ಟ್ ಮರೀನ್

ಶೋರ್ಟ್ ಮರೀನ್ | Photo: Hockey India
ಹೊಸದಿಲ್ಲಿ, ಜ. 2: ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ಮುಖ್ಯ ಕೋಚ್, ನೆದರ್ಲ್ಯಾಂಡ್ಸ್ನ ಶೋರ್ಟ್ ಮರೀನ್ ಮತ್ತೆ ತಂಡದ ಮುಖ್ಯ ಕೋಚ್ ಆಗಿ ವಾಪಸಾಗಲಿದ್ದಾರೆ. ಈ ವಿಷಯವನ್ನು ಹಾಕಿ ಇಂಡಿಯಾ ಶುಕ್ರವಾರ ಅಧಿಕೃತವಾಗಿ ಖಚಿತಪಡಿಸಿದೆ.
ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದ ಹರೇಂದ್ರ ಸಿಂಗ್ ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಹರೇಂದ್ರ ಸಿಂಗ್ ಕಿರುಕುಳ ನೀಡುತ್ತಾರೆ ಮತ್ತು ಅವರ ತರಬೇತಿ ಪರಿಣಾಮಕಾರಿಯಾಗಿಲ್ಲ ಎಂದು ಆಟಗಾರ್ತಿಯರು ದೂರಿದ ಬಳಿಕ ಅವರು ರಾಜೀನಾಮೆ ನೀಡಿದ್ದರು.
ಮರೀನ್ ಉಸ್ತುವಾರಿಯಲ್ಲಿದ್ದ ಭಾರತೀಯ ಮಹಿಳಾ ತಂಡವು 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನವನ್ನು ಪಡೆದಿತ್ತು. ಹರೇಂದ್ರ ಸಿಂಗ್ ರಾಜೀನಾಮೆಗೆ ಮುನ್ನವೇ ಅವರ ಸ್ಥಾನಕ್ಕೆ ಮರೀನ್ ಅವರನ್ನು ನೇಮಿಸುವ ಕುರಿತು ಮಾತುಕತೆ ನಡೆದಿತ್ತು ಎನ್ನಲಾಗಿದೆ.
ಈಗ ಮರೀನ್ ಮೂರು ತಿಂಗಳ ಅವಧಿಯಲ್ಲಿ ತಮ್ಮ ‘ಮ್ಯಾಜಿಕ್’ ಅನ್ನು ಪುನರಾವರ್ತಿಸುವ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಮಾರ್ಚ್ನಲ್ಲಿ ಹೈದರಾಬಾದ್ನಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತೀಯ ಮಹಿಳಾ ತಂಡ ಪಾಲ್ಗೊಳ್ಳಲಿದೆ.
ಹಾಕಿ ಇಂಡಿಯಾದೊಂದಿಗೆ ಕೋಚ್ ಸಹಿ ಹಾಕಿರುವ ಗುತ್ತಿಗೆಯಂತೆ, ಅವರ ಎರಡನೇ ಅವಧಿ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ವರೆಗೆ ಇರುತ್ತದೆ. ಅವರು ತಮ್ಮೊಂದಿಗೆ ಹಲವು ಸಹಾಯಕ ಸಿಬ್ಬಂದಿಯನ್ನೂ ಕರೆತಂದಿದ್ದಾರೆ.
ಅರ್ಜೆಂಟೀನಾದ ಮಾಜಿ ರಕ್ಷಣಾ ಆಟಗಾರ ಹಾಗೂ ಒಲಿಂಪಿಯನ್ ಮಟಿಯಾಸ್ ವಿಲ್ಲಾ ಎದುರಾಳಿ ಆಟಗಾರರ ಬಲಾಬಲಗಳನ್ನು ವಿಶ್ಲೇಷಿಸುವ ಅನಾಲಿಟಿಕಲ್ ಕೋಚ್ ಆಗಿ ತಂಡವನ್ನು ಸೇರಲಿದ್ದಾರೆ. ವೇನ್ ಲೊಂಬಾರ್ಡ್ ಅತ್ಲೆಟಿಕ್ ಪರ್ಫಾರ್ಮನ್ಸ್ನ ಮುಖ್ಯಸ್ಥರಾಗಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಭಾರತೀಯ ಆಟಗಾರರ ಅಮೋಘ ದೈಹಿಕ ಕ್ಷಮತೆಯ ಯಶಸ್ಸಿನ ಶ್ರೇಯಸ್ಸು ಅವರಿಗೆ ನೀಡಲಾಗಿತ್ತು.
ದಕ್ಷಿಣ ಆಫ್ರಿಕಾದ ರೋಡೆಟ್ ಯಿಲ್ ಮತ್ತು ಸಿಯಾರಾ ಯಿಲ್ ವೈಜ್ಞಾನಿಕ ಸಲಹೆಗಾರರಾಗಿ ಲೊಂಬಾರ್ಡ್ ಅವರಿಗೆ ಸಹಾಯ ಮಾಡಲಿದ್ದಾರೆ.







