ಜೂನಿಯರ್ ಮಹಿಳೆಯರ ಹಾಕಿ ಟೂರ್ನಿ | ಉರುಗ್ವೆ ವಿರುದ್ಧ ಭಾರತಕ್ಕೆ ರೋಚಕ ಜಯ
ಹೊಸದಿಲ್ಲಿ: ಅರ್ಜೆಂಟೀನದ ರೋಸಾರಿಯೊದಲ್ಲಿ ರವಿವಾರ ನಡೆದ ನಾಲ್ಕು ರಾಷ್ಟ್ರಗಳ ಪಂದ್ಯಾವಳಿಯ ತನ್ನ 2ನೇ ಪಂದ್ಯದಲ್ಲಿ ಕನಿಕಾ ಸಿವಾಚ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತೀಯ ಜೂನಿಯರ್ ಮಹಿಳೆಯರ ಹಾಕಿ ತಂಡವು ಉರುಗ್ವೆ ತಂಡದ ವಿರುದ್ಧ 3-2 ಗೋಲುಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.
ಕನಿಕಾ 46ನೇ ಹಾಗೂ 50ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಸೋನಮ್ 21ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಉರುಗ್ವೆ ಪರ ಮಿಲಾಗ್ರೋಸ್ ಸೀಗಲ್(3ನೇ ನಿಮಿಷ) ಹಾಗೂ ಅಗಸ್ಟಿನಾ(24ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು.
ಉರುಗ್ವೆ 3ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಆರಂಭಿಕ ಮುನ್ನಡೆ ಸಾಧಿಸಿತು. 21ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದ ಸೋನಮ್ ಭಾರತ ತಂಡ ಸಮಬಲ ಸಾಧಿಸಲು ನೆರವಾದರು. ಆದರೆ 3 ನಿಮಿಷಗಳ ನಂತರ ಉರುಗ್ವೆ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಮ್ಮೆ ಮುನ್ನಡೆ ಪಡೆದರು.
3ನೇ ಕ್ವಾರ್ಟರ್ ಅಂತ್ಯಕ್ಕೆ ಪಂದ್ಯ ಸಮಬಲಗೊಂಡಿತು. ಆದರೆ ಕನಿಕಾ ಸಿವಾಚ್ ನಿರ್ಣಾಯಕ ಅವಳಿ ಗೋಲು ಗಳಿಸಿ ಭಾರತ ಜಯಶಾಲಿಯಾಗುವಲ್ಲಿ ನೆರವಾದರು.
ಕನಿಕಾ 46ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ನ ಮೂಲಕ ಮೊದಲ ಗೋಲು ಗಳಿಸಿದರು. ಆ ನಂತರ 50ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು.
ಭಾರತ ತಂಡವು ಮಂಗಳವಾರ ಆತಿಥೇಯ ಅರ್ಜೆಂಟೀನ ತಂಡವನ್ನು ಎದುರಿಸಲಿದೆ.







