ಮಹಿಳೆಯರ ಹಾಕಿ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಹೈದರಾಬಾದ್ ಆತಿಥ್ಯ

Photo Credit ; PTI
ಹೊಸದಿಲ್ಲಿ, ಡಿ.11: ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಲು ಭಾರತೀಯ ಮಹಿಳಾ ಹಾಕಿ ತಂಡ ಸ್ವದೇಶದಲ್ಲಿ ಕೊನೆಯ ಉತ್ತಮ ಅವಕಾಶವೊಂದನ್ನು ಪಡೆಯಲಿದೆ.
ಎಫ್ಐಎಚ್ ಗುರುವಾರ ವಿಶ್ವಕಪ್ ಅರ್ಹತಾ ಪಂದ್ಯಗಳ ದಿನಾಂಕ ಹಾಗೂ ಸ್ಥಳಗಳನ್ನು ಘೋಷಿಸಿದೆ. ಭಾರತವು 8 ತಂಡಗಳ ಒಂದು ಸ್ಪರ್ಧೆಯನ್ನು ಮಾರ್ಚ್ 8ರಿಂದ 14ರ ತನಕ ಹೈದರಾಬಾದ್ನಲ್ಲಿ ಆಯೋಜಿಸಲಿದೆ.
ಮಹಿಳೆಯರ ಅರ್ಹತಾ ಸುತ್ತಿನ ಉಳಿದ ಪಂದ್ಯಗಳು ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯಲಿದೆ.
ಭಾರತ ತಂಡವಲ್ಲದೆ, ಇಂಗ್ಲೆಂಡ್, ಸ್ಕಾಟ್ಲ್ಯಾಂಡ್, ಕೊರಿಯಾ, ಇಟಲಿ, ಉರುಗ್ವೆ, ವೇಲ್ಸ್ ಹಾಗೂ ಆಸ್ಟ್ರೀಯ ತಂಡಗಳು ಅರ್ಹತೆಯ ಸ್ಪರ್ಧೆಯಲ್ಲಿವೆ. ಇಂಗ್ಲೆಂಡ್ ನಂತರ ಭಾರತವು ಎರಡನೇ ರ್ಯಾಂಕಿನ ತಂಡವಾಗಿದೆ.
ಪ್ರತೀ ಕ್ವಾಲಿಫೈಯರ್ನ ಅಗ್ರ ಮೂರು ತಂಡಗಳು ಬೆಲ್ಜಿಯಂನಲ್ಲಿ 2026ರಲ್ಲಿ ನಡೆಯಲಿರುವ ವಿಶ್ವಕಪ್ ಗೆ ಅರ್ಹತೆ ಪಡೆಯಲಿವೆ.
ಭಾರತೀಯ ಪುರುಷರ ತಂಡವು ಈ ವರ್ಷಾರಂಭದಲ್ಲಿ ಏಶ್ಯ ಕಪ್ ಜಯಿಸುವ ಮೂಲಕ ಈಗಾಗಲೇ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.





