ಮಹಿಳೆಯರ ಜೂನಿಯರ್ ಹಾಕಿ ಏಶ್ಯಕಪ್ : ಪಾಕಿಸ್ತಾನ ವಿರುದ್ಧ ಭರ್ಜರಿ ಜಯ; ಭಾರತ ಸೆಮಿ ಫೈನಲ್ಗೆ

Photo Credit : PTI
ಮೋಖಿ(ಚೀನಾ): ಭಾರತ ತಂಡವು 2026ರ ಆವೃತ್ತಿಯ ಮಹಿಳೆಯರ ಜೂನಿಯರ್ ಏಶ್ಯಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 19-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ. ಇದರೊಂದಿಗೆ ಪಂದ್ಯಾವಳಿಯಲ್ಲಿ ಅಂತಿಮ-4ರ ಹಂತ ಪ್ರವೇಶಿಸಿದೆ.
ಜಪಾನ್, ಮಲೇಶ್ಯ ಹಾಗೂ ದಕ್ಷಿಣ ಕೊರಿಯಾ ತಂಡಗಳನ್ನು ಮಣಿಸಿರುವ ಭಾರತ ತಂಡವು ಏಶ್ಯಕಪ್ನ ತನ್ನ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾ ಅಥವಾ ಮಲೇಶ್ಯ ತಂಡವನ್ನು ಎದುರಿಸಲಿದೆ.
ಪೂಜಾ ಸಾಹು ಏಳನೇ ನಿಮಿಷದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೋಲು ಖಾತೆ ತೆರೆದರು. ಆನಂತರ ಹಾಲಿ ಚಾಂಪಿಯನ್ ತಂಡದ ಪರ ರೋಶನಿ(9ನೇ, 60ನೇ ನಿಮಿಷ), ತನುಶ್ರೀ(11ನೇ ನಿ.), ಸುಖವೀರ್ ಕೌರ್(13ನೇ ನಿ.), ಸಾನಿಕಾ ಮಾನೆ(13ನೇ, 23ನೇ ನಿ.), ಮಧು ಸಿದಾರ್(16ನೇ, 39ನೇ), ಗೀತಾ ಯಾದವ್(18ನೇ), ತನುಜಾ ಟೊಪ್ಪೊ(25ನೇ ನಿ.), ಪೂಜಾ ಮಲಿಕ್(27ನೇ, 49ನೇ, 51ನೇ ನಿ.), ಪೂರ್ಣಿಮಾ ಯಾದವ್(33ನೇ ನಿ.), ಸುಪ್ರಿಯಾ(40ನೇ, 54ನೇ ನಿ.) ಕೃಷ್ಣಾ ಶರ್ಮಾ(48ನೇ ನಿ.) ಹಾಗೂ ಬಿನಿಮಾ ಧನ್(55ನೇ ನಿ.) ಗೋಲುಗಳ ಸುರಿಮಳೆಗೆರದು ಎದುರಾಳಿಯನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದರು.
ಮೊದಲಾರ್ಧದಲ್ಲಿ ಭಾರತವು 10-0 ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಇನ್ನೂ 9 ಗೋಲುಗಳು ದಾಖಲಾದವು. ಪೂಜಾ ಮಲಿಕ್ ಹ್ಯಾಟ್ರಿಕ್ ಗೋಲು ಗಳಿಸಿದರೆ, ಸಾನಿಕಾ, ಮಧು ಹಾಗೂ ಸುಪ್ರಿಯಾ ಅವಳಿ ಗೋಲು ಗಳಿಸಿದರು. ಭಾರತದ ಗೋಲುಗಳ ಸುರಿಮಳೆಗೆ ಪಾಕಿಸ್ತಾನ ತಂಡ ನಿರುತ್ತರವಾಯಿತು.
2023 ಹಾಗೂ 2024ರಲ್ಲಿ ಜೂನಿಯರ್ ಏಶ್ಯ ಕಪ್ ಪ್ರಶಸ್ತಿಗಳನ್ನು ಗೆದ್ದಿರುವ ಭಾರತ ತಂಡವು ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲಲು ಇನ್ನು ಎರಡೇ ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ.






