ಮಹಿಳೆಯರ ಕಬಡ್ಡಿ ವಿಶ್ವಕಪ್: ಭಾರತ ತಂಡ ಚಾಂಪಿಯನ್

PC : khelnow.com
ಢಾಕಾ, ನ.24: ಚೈನೀಸ್ ತೈಪೆ ತಂಡವನ್ನು ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ 35-28 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿರುವ ಭಾರತ ತಂಡವು ಪ್ರತಿಷ್ಠಿತ ಮಹಿಳೆಯರ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಕಬಡ್ಡಿ ಕ್ರೀಡೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.
ಇದೇ ಮೊದಲ ಬಾರಿ ಭಾರತದಿಂದ ಹೊರಗೆ ಬಾಂಗ್ಲಾದೇಶದ ಢಾಕಾದಲ್ಲಿ ಕಬಡ್ಡಿ ವಿಶ್ವಕಪ್ ಟೂರ್ನಿ ನಡೆದಿದೆ. 13 ವರ್ಷಗಳ ನಂತರ ಎರಡನೇ ಆವೃತ್ತಿಯ ಮಹಿಳೆಯರ ವಿಶ್ವಕಪ್ ಆಯೋಜಿಸಲಾಗಿದೆ. 2012ರಲ್ಲಿ ಬಿಹಾರದ ಪಾಟ್ನಾದಲ್ಲಿ ಕೊನೆಯ ಬಾರಿ ವಿಶ್ವಕಪ್ ನಡೆದಿತ್ತು. 2012ರ ಮೊದಲ ಆವೃತ್ತಿಯ ವಿಶ್ವಕಪ್ ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಬಾಂಗ್ಲಾದೇಶದ ಮೀರ್ಪುರದಲ್ಲಿ ನವೆಂಬರ್ 17ರಿಂದ 24ರ ತನಕ 2025ರ ಆವೃತ್ತಿಯ ವಿಶ್ವಕಪ್ ಟೂರ್ನಿ ಯಶಸ್ವಿಯಾಗಿ ನೆರವೇರಿದೆ.
ಒಟ್ಟು 11 ದೇಶಗಳು ಜಾಗತಿಕ ಸ್ಪರ್ಧಾವಳಿಯಲ್ಲಿ ಭಾಗವಹಿಸಿದ್ದು ಭಾರತ ತಂಡವು ಎರಡನೇ ಬಾರಿ ಮಹಿಳೆಯರ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಭಾರತ ತಂಡ ರವಿವಾರ ನಡೆದ ಸೆಮಿ ಫೈನಲ್ ನಲ್ಲಿ ಇರಾನ್ ತಂಡವನ್ನು 33-21 ಅಂಕಗಳ ಅಂತರದಿಂದ ಮಣಿಸಿ ಫೈನಲ್ ಗೆ ತಲುಪಿತ್ತು.
ಚೈನೀಸ್ ತೈಪೆ ತಂಡವು ಆತಿಥೇಯ ಬಾಂಗ್ಲಾದೇಶ ತಂಡವನ್ನು 25-18 ಅಂಕಗಳ ಅಂತರದಿಂದ ಸದೆಬಡಿದು ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿತ್ತು. ಭಾರತ ಹಾಗೂ ಚೈನೀಸ್ ತೈಪೆ ತಂಡಗಳು ಗ್ರೂಪ್ ಹಂತದಲ್ಲಿ ಅಜೇಯ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡಿದ್ದವು.
ಭಾರತ ತಂಡವು ‘ಎ’ ಗುಂಪಿನಲ್ಲಿ ಆಡಿರುವ ಎಲ್ಲ 4 ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಚೈನೀಸ್ ತೈಪೆ ‘ಬಿ’ ಗುಂಪಿನಲ್ಲಿ ಎಲ್ಲ ಐದು ಪಂದ್ಯಗಳನ್ನು ಗೆದ್ದುಕೊಂಡಿತ್ತು.







