ಮಹಿಳೆಯರ ರಾಷ್ಟ್ರೀಯ ಹಾಕಿ ಶಿಬಿರ : ಭಾರತ ತಂಡಕ್ಕೆ ದೀಪಿಕಾ ಸೇರ್ಪಡೆ

ದೀಪಿಕಾ | PTI
ಹೊಸದಿಲ್ಲಿ, ಅ.24: ಬೆಂಗಳೂರಿನ ಸಾಯ್ ಸೆಂಟರ್ನಲ್ಲಿ ಅ.24ರಿಂದ ಡಿ.7ರ ತನಕ ನಡೆಯಲಿರುವ ಹಿರಿಯ ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 39 ಸದಸ್ಯರ ಕೋರ್ ಗ್ರೂಪ್ ಅನ್ನು ಹಾಕಿ ಇಂಡಿಯಾ ಶುಕ್ರವಾರ ನೇಮಿಸಿದೆ.
ಈ ಶಿಬಿರದ ಮೂಲಕ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಕ್ವಾಲಿಫೈಯರ್ಸ್ಗೆ ತಂಡವನ್ನು ಅಂತಿಮಗೊಳಿಸಲಾಗುತ್ತದೆ. ಕ್ವಾಲಿಫೈಯರ್ಸ್ನಲ್ಲಿ ಭಾರತವು ವೇಲ್ಸ್, ಸ್ಕಾಟ್ಲ್ಯಾಂಡ್ ಹಾಗೂ ಉರುಗ್ವೆ ತಂಡವನ್ನು ಎದುರಿಸಲಿದೆ.
ಗಾಯಗೊಂಡಿದ್ದ ಸ್ಟಾರ್ ಡ್ರ್ಯಾಗ್ ಫ್ಲಿಕರ್ ದೀಪಿಕಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಸಂಭಾವ್ಯ ತಂಡದಲ್ಲಿ ಗೋಲ್ಕೀಪರ್ಗಳಾದ ಬಿಚು ದೇವಿ, ಬನ್ಸಾರಿ ಸೋಲಂಕಿ, ಸಮೀಕ್ಷಾ ಸಕ್ಸೇನಾ ಅವರಿದ್ದಾರೆ. ಡಿಫೆಂಡರ್ಗಳಾದ ನಿಕ್ಕಿ ಪ್ರಧಾನ್, ಸುಶೀಲಾ ಚಾನು ಹಾಗೂ ಉದಿತಾ, ಹೊಸ ಮುಖಗಳಾದ ಇಶಿಕಾ ಚೌಧರಿ ಹಾಗೂ ಜ್ಯೋತಿ ಚಟ್ರಿ ಸ್ಥಾನ ಪಡೆದಿದ್ದಾರೆ.
ಮಿಡ್ ಫೀಲ್ಡರ್ಗಳಾದ ನೇಹಾ, ಸಲಿಮಾ ಟೇಟೆ ಹಾಗೂ ವೈಷ್ಣವಿ ಫಾಲ್ಕೆ ತಂಡಕ್ಕೆ ಶಕ್ತಿ ತುಂಬಲಿದ್ದಾರೆ. ನವನೀತ್ ಕೌರ್, ಸಂಗೀತಾ ಕುಮಾರಿ ಹಾಗೂ ಮುಮ್ತಾಝ್ ಖಾನ್ ಫಾರ್ವರ್ಡ್ ಲೈನ್ನಲ್ಲಿದ್ದಾರೆ.





