ಮಹಿಳೆಯರ ಏಕದಿನ ವಿಶ್ವಕಪ್ ಪರಿಷ್ಕೃತ ವೇಳಾಪಟ್ಟಿ ಪ್ರಕಟ; ಬೆಂಗಳೂರಿನ ಪಂದ್ಯಗಳು ನವಿ ಮುಂಬೈಗೆ ಸ್ಥಳಾಂತರ!

PC : X
ಮುಂಬೈ, ಆ.22: ಸೆಪ್ಟಂಬರ್ 30ರಂದು ಆರಂಭವಾಗಲಿರುವ ಮಹಿಳೆಯರ 50 ಓವರ್ಗಳ ವಿಶ್ವಕಪ್ ಟೂರ್ನಿಯ ಆತಿಥ್ಯವಹಿಸಿರುವ ಐದು ನಗರಗಳ ಪೈಕಿ ಒಂದಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ನಿಗದಿಯಾಗಿರುವ ಪಂದ್ಯಗಳನ್ನು ನವಿ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಶುಕ್ರವಾರ ಪ್ರಕಟಿಸಿದೆ. ಈ ಮೂಲಕ ಬೆಂಗಳೂರಿಗೆ ನಷ್ಟವಾದರೆ, ನವಿ ಮುಂಬೈಗೆ ಲಾಭವಾಗಿದೆ.
‘‘ಚಿನ್ನಸ್ವಾಮಿ ಸ್ಟೇಡಿಯಂ ಲಭ್ಯವಿರದ ಕಾರಣ ಬೆಂಗಳೂರಿನ ಬದಲಿಗೆ ನವಿ ಮುಂಬೈನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುವುದು. ಭಾರತ ಹಾಗೂ ಶ್ರೀಲಂಕಾದಲ್ಲಿ 8 ತಂಡಗಳ ನಡುವೆ ನಡೆಯಲಿರುವ ಮಹಿಳೆಯರ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಗಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ನಾವು ಪ್ರಕಟಿಸಿದ್ದೇವೆ’’ ಎಂದು ಐಸಿಸಿ ಶುಕ್ರವಾರ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಜೂನ್ 4ರಂದು ಆರ್ಸಿಬಿಯ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆಎಸ್ಸಿಎ)ಪಂದ್ಯಗಳಿಗಾಗಿ ಅನುಮತಿ ಪಡೆಯುವಲ್ಲಿ ವಿಫಲವಾದ ನಂತರ 2025ರ ಆವೃತ್ತಿಯ ಮಹಿಳೆಯರ ವಿಶ್ವಕಪ್ ಪಂದ್ಯಗಳನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಲಾಗಿದೆ.
ಡಿ.ವೈ. ಪಾಟೀಲ್ ಸ್ಟೇಡಿಯಂ ಇದೀಗ ಪಂದ್ಯಾವಳಿಯಲ್ಲಿ 5 ಪಂದ್ಯಗಳ ಆತಿಥ್ಯವಹಿಸಲಿದೆ. ಮೂರು ಲೀಗ್ ಪಂದ್ಯಗಳು, ಒಂದು ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದ ಆತಿಥ್ಯವನ್ನು ನವಿ ಮುಂಬೈ ವಹಿಸಿಕೊಳ್ಳಲಿದೆ.
13ನೇ ಆವೃತ್ತಿಯ ಮಹಿಳೆಯರ ಏಶ್ಯಕಪ್ ಟೂರ್ನಿಯು ಸೆ.30ರಿಂದ ನ.2ರ ತನಕ ಗುವಾಹಟಿಯ ಎಸಿಎ ಸ್ಟೇಡಿಯಂ, ಇಂದೋರ್ ನ ಹೋಲ್ಕರ್ ಸ್ಟೇಡಿಯಂ, ವಿಶಾಖಪಟ್ಟಣದ ಎಸಿಎ-ವಿಡಿಸಿಎ ಸ್ಟೇಡಿಯಂ ಹಾಗೂ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಆತಿಥೇಯ ದೇಶಗಳಾದ ಭಾರತ ಹಾಗೂ ಶ್ರೀಲಂಕಾ ಸೆಪ್ಟಂಬರ್ 30ರಂದು ಗುವಾಹಟಿಯಲ್ಲಿ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಆಡಲಿವೆ.
ಪಂದ್ಯಾವಳಿಯ ಇನ್ನುಳಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
ವಿಶ್ವ ದರ್ಜೆಯ ಡಿ.ವೈ. ಪಾಟೀಲ್ ಸ್ಟೇಡಿಯಮ್ ನಲ್ಲಿ ಇದೇ ಮೊದಲ ಬಾರಿ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. 2022ರಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ನಡೆದಿದ್ದ ಟಿ-20 ಸರಣಿಯಲ್ಲಿ 45,000 ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣವು ಭರ್ತಿಯಾಗಿತ್ತು. 2023ರ ಮಾರ್ಚ್ ನಲ್ಲಿ ಮೊದಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ ನ 11 ಪಂದ್ಯಗಳಿಗೆ ಈ ಸ್ಟೇಡಿಯಂ ಆತಿಥ್ಯವಹಿಸಿತ್ತು. 2008 ಹಾಗೂ 2010ರಲ್ಲಿ ಐಪಿಎಲ್ ಫೈನಲ್ಸ್ ಆಯೋಜಿಸಿತ್ತು.
ಮಹಿಳೆಯರ ವಿಶ್ವಕಪ್ನಲ್ಲಿ 8 ತಂಡಗಳಾದ ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡವಲ್ಲದೆ, ಆತಿಥೇಯ ಭಾರತ ಹಾಗೂ ಶ್ರೀಲಂಕಾ ಭಾಗವಹಿಸಲಿವೆ. ಸ್ಪರ್ಧಾವಳಿಯಲ್ಲಿ 28 ಲೀಗ್ ಪಂದ್ಯಗಳು, ಎರಡು ಸೆಮಿ ಫೈನಲ್ ಗಳು ಹಾಗೂ ಒಂದು ಫೈನಲ್ ಸಹಿತ ಒಟ್ಟು 31 ಪಂದ್ಯಗಳು ನಡೆಯಲಿದೆ.
*ಮಹಿಳೆಯರ ವಿಶ್ವಕಪ್ ವೇಳಾಪಟ್ಟಿ
ಸೆ.30: ಭಾರತ-ಶ್ರೀಲಂಕಾ, ಗುವಾಹಟಿ
ಅ.1: ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್, ಇಂದೋರ್
ಅ.2: ಬಾಂಗ್ಲಾದೇಶ-ಪಾಕಿಸ್ತಾನ, ಕೊಲಂಬೊ
ಅ.3: ಇಂಗ್ಲೆಂಡ್-ದಕ್ಷಿಣ ಆಫ್ರಿಕಾ, ಗುವಾಹಟಿ
ಅ.4: ಆಸ್ಟ್ರೇಲಿಯ-ಶ್ರೀಲಂಕಾ, ಕೊಲಂಬೊ
ಅ.5: ಭಾರತ-ಪಾಕಿಸ್ತಾನ, ಕೊಲಂಬೊ
ಅ.6: ನ್ಯೂಝಿಲ್ಯಾಂಡ್-ದಕ್ಷಿಣ ಆಫ್ರಿಕಾ, ಇಂದೋರ್
ಅ.7: ಇಂಗ್ಲೆಂಡ್-ಬಾಂಗ್ಲಾದೇಶ, ಗುವಾಹಟಿ
ಅ.8: ಆಸ್ಟ್ರೇಲಿಯ-ಪಾಕಿಸ್ತಾನ, ಕೊಲಂಬೊ
ಅ.9: ಭಾರತ-ದಕ್ಷಿಣ ಆಫ್ರಿಕಾ, ವಿಶಾಖಪಟ್ಟಣ
ಅ.10: ನ್ಯೂಝಿಲ್ಯಾಂಡ್-ಬಾಂಗ್ಲಾದೇಶ, ಗುವಾಹಟಿ
ಅ.11: ಇಂಗ್ಲೆಂಡ್-ಶ್ರೀಲಂಕಾ, ಕೊಲಂಬೊ
ಅ.12: ಭಾರತ-ಆಸ್ಟ್ರೇಲಿಯ, ವಿಶಾಖಪಟ್ಟಣ
ಅ.13: ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ, ವಿಶಾಖಪಟ್ಟಣ
ಅ.14: ನ್ಯೂಝಿಲ್ಯಾಂಡ್-ಶ್ರೀಲಂಕಾ, ಕೊಲಂಬೊ
ಅ.15: ಇಂಗ್ಲೆಂಡ್-ಪಾಕಿಸ್ತಾನ, ಕೊಲಂಬೊ
ಅ.16: ಆಸ್ಟ್ರೇಲಿಯ-ಬಾಂಗ್ಲಾದೇಶ, ವಿಶಾಖಪಟ್ಟಣ
ಅ.17: ದಕ್ಷಿಣ ಆಫ್ರಿಕಾ-ಶ್ರೀಲಂಕಾ,ಕೊಲಂಬೊ
ಅ.18: ನ್ಯೂಝಿಲ್ಯಾಂಡ್-ಪಾಕಿಸ್ತಾನ, ಕೊಲಂಬೊ
ಅ.19: ಭಾರತ-ಇಂಗ್ಲೆಂಡ್, ಇಂದೋರ್
ಅ.20: ಶ್ರೀಲಂಕಾ-ಬಾಂಗ್ಲಾದೇಶ, ನವಿ ಮುಂಬೈ
ಅ.21: ದಕ್ಷಿಣ ಆಫ್ರಿಕಾ-ಪಾಕಿಸ್ತಾನ, ಕೊಲಂಬೊ
ಅ.22: ಆಸ್ಟ್ರೇಲಿಯ-ಇಂಗ್ಲೆಂಡ್, ಇಂದೋರ್
ಅ.23: ಭಾರತ-ನ್ಯೂಝಿಲ್ಯಾಂಡ್, ನವಿ ಮುಂಬೈ
ಅ.24: ಶ್ರೀಲಂಕಾ-ಪಾಕಿಸ್ತಾನ, ಕೊಲಂಬೊ
ಅ.25: ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ, ಇಂದೋರ್
ಅ.26: ಇಂಗ್ಲೆಂಡ್-ನ್ಯೂಝಿಲ್ಯಾಂಡ್, ವಿಶಾಖಪಟ್ಟಣ
ಅ.26: ಭಾರತ-ಬಾಂಗ್ಲಾದೇಶ, ನವಿ ಮುಂಬೈ
ಅ.29: ಸೆಮಿ ಫೈನಲ್-1, ಗುವಾಹಟಿ/ಕೊಲಂಬೊ
ಅ.30: ಸೆಮಿ ಫೈನಲ್-2, ನವಿ ಮುಂಬೈ
ನ.2: ಫೈನಲ್, ನವಿ ಮುಂಬೈ







