ಮಹಿಳಾ ಏಕದಿನ ವಿಶ್ವಕಪ್ | ಭಾರತಕ್ಕೆ ಸವಾಲಿನ ಸೆಮಿಫೈನಲ್ ಹಾದಿ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ,ಅ. 21: ರವಿವಾರ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಬಳಿಕ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತದ ಸ್ಥಿತಿ ಅತಂತ್ರವಾಗಿದೆ. ಇದು ಪಂದ್ಯಾವಳಿಯಲ್ಲಿ ಭಾರತದ ನಿರಂತರ ಮೂರನೇ ಸೋಲಾಗಿದೆ. ಇಂಗ್ಲೆಂಡ್ನ ಜಯವು ತಂಡಕ್ಕೆ ಸೆಮಿಫೈನಲ್ ಸ್ಥಾನವನ್ನು ಖಾತರಿಪಡಿಸಿತು. ಅದಕ್ಕೂ ಮೊದಲು, ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ಸೆಮಿಫೈನಲ್ ತಲುಪಿದ್ದವು. ಈಗ ಏಕೈಕ ಸೆಮಿಫೈನಲ್ ಸ್ಥಾನ ಖಾಲಿಯಿದೆ.
ಅಂಕಪಟ್ಟಿಯಲ್ಲಿ ಈಗ ಭಾರತ ಐದು ಪಂದ್ಯಗಳಿಂದ ನಾಲ್ಕು ಅಂಕ ಮತ್ತು +0.526 ನೆಟ್ ರನ್ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸೆಮಿಫೈನಲ್ ಸ್ಥಾನದ ಇನ್ನೊಂದು ಪ್ರಬಲ ಆಕಾಂಕ್ಷಿಯಾಗಿರುವ ನ್ಯೂಝಿಲ್ಯಾಂಡ್ ಕೂಡ ನಾಲ್ಕು ಅಂಕಗಳನ್ನು ಗಳಿಸಿದೆ. ಆದರೆ, ಅದ ನೆಟ್ ರನ್ರೇಟ್ -0.245 ಆಗಿದೆ.
ಈಗ ಭಾರತದ ಸೆಮಿಫೈನಲ್ ಆಶೆಯು ಗುಂಪಿನ ಉಳಿದಿರುವ ಎರಡು ಪಂದ್ಯಗಳನ್ನು ಅವಲಂಬಿಸಿದೆ. ಇನ್ನು ಭಾರತವು ಗುರುವಾರ ನ್ಯೂಝಿಲ್ಯಾಂಡನ್ನು ಎದುರಿಸಲಿದೆ. ಬಳಿಕ ಅದು ತನ್ನ ಗುಂಪಿನ ಕೊನೆಯ ಪಂದ್ಯವನ್ನು ಅಕ್ಟೋಬರ್ 26ರಂದು ಬಾಂಗ್ಲಾದೇಶ ವಿರುದ್ಧ ಆಡುವುದು. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದರೆ ಅದು ಸೆಮಿಫೈನಲ್ ತಲುಪುವುದು.
ಒಂದು ವೇಳೆ, ಭಾರತವು ನ್ಯೂಝಿಲ್ಯಾಂಡ್ ವಿರುದ್ಧ ಸೋಲನುಭವಿಸಿದರೆ, ಅದು ಸೆಮಿಫೈನಲ್ ತಲುಪಲು ನ್ಯೂಝಿಲ್ಯಾಂಡ್ ತನ್ನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಬೇಕು ಮತ್ತು ಭಾರತವು ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಬೇಕು.
ಇನ್ನೊಂದು ಸಾಧ್ಯತೆಯೂ ಇದೆ. ಒಂದು ವೇಳೆ ಭಾರತವು ನ್ಯೂಝಿಲ್ಯಾಂಡನ್ನು ಸೋಲಿಸಿದರೆ, ಆದರೆ ಬಾಂಗ್ಲಾದೇಶದ ವಿರುದ್ಧ ಸೋತರೆ ಹಾಗೂ ನ್ಯೂಝಿಲ್ಯಾಂಡ್ ಇಂಗ್ಲೆಂಡನ್ನು ಸೋಲಿಸಿದರೆ ಉತ್ತಮ ನೆಟ್ ರನ್ರೇಟ್ ಹೊಂದಿರುವ ತಂಡವು ಸೆಮಿಫೈನಲ್ ತಲುಪುತ್ತದೆ







