ಮಹಿಳೆಯರ ಟಿ-20 ಬೌಲಿಂಗ್ ರ್ಯಾಂಕಿಂಗ್ : ಅಗ್ರ ಸ್ಥಾನ ಉಳಿಸಿಕೊಂಡ ಶ್ರೀಚರಣಿ

ಶ್ರೀಚರಣಿ | Photo Credit : PTI
ದುಬೈ: ಮಹಿಳೆಯರ ಟಿ-20 ಬೌಲಿಂಗ್ ರ್ಯಾಂಕಿಂಗ್ನಲ್ಲಿ ಭಾರತವು ತನ್ನ ಶ್ರೇಷ್ಠ ಸಾಧನೆ ಮುಂದುವರಿಸಿದ್ದು, ಶ್ರೀಚರಣಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 2026ರ ಆವೃತ್ತಿಯ ಏಶ್ಯಕಪ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ದೀಪ್ತಿ ಶರ್ಮಾ ಎರಡು ಸ್ಥಾನ ಜಿಗಿದು ಆರನೇ ಸ್ಥಾನಕ್ಕೇರಿದ್ದಾರೆ.
ದೀಪ್ತಿ ಪಂದ್ಯಾವಳಿಯಲ್ಲಿ ಭಾರತದ ಪರ ಅತ್ಯಂತ ಶ್ರೇಷ್ಠ ಪ್ರದರ್ಶನ ನೀಡಿದ್ದು, ಮೂರು ಪಂದ್ಯಗಳಲ್ಲಿ ಎಂಟು ವಿಕೆಟ್ಗಳನ್ನು ಉರುಳಿಸಿದರು. ತಂಡವು ಸೆಮಿ ಫೈನಲ್ಗೆ ತಲುಪುವಲ್ಲಿ ನೆರವಾದರು.
ಬಲಗೈ ಸ್ಪಿನ್ನರ್ ದೀಪ್ತಿ ಸ್ಥಿರ ಪ್ರದರ್ಶನ ನೀಡುವ ಮೂಲಕ ರ್ಯಾಂಕಿಂಗ್ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಅಗ್ರ ಸ್ಥಾನ ತಲುಪಿದ್ದ ದೀಪ್ತಿ ಅವರು ಚರಣಿಗಿಂತ 60 ರೇಟ್ ಪಾಯಿಂಟ್ಸ್ನಿಂದ ಹಿಂದುಳಿದಿದ್ದಾರೆ. ಭಾರತದ ಇಬ್ಬರು ಸ್ಟಾರ್ಗಳ ನಡುವೆ ನಾಲ್ವರು ಬೌಲರ್ಗಳಾದ ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್, ಮ್ಲಾಬಾ ಹಾಗೂ ಲಾರೆನ್ ಬೆಲ್ ಅವರಿದ್ದಾರೆ.
ಚಾರ್ಲಿ ಡೀನ್ಗೆ ಭಡ್ತಿ: ಐರ್ಲ್ಯಾಂಡ್ ತಂಡದ ವಿರುದ್ಧ ಇಂಗ್ಲೆಂಡ್ನ ಸ್ವದೇಶಿ ಸರಣಿಯ ನಂತರ ಹೊಸ ಏಕದಿನ ರ್ಯಾಂಕಿಂಗ್ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಇಂಗ್ಲೆಂಡ್ನ ಹಂಗಾಮಿ ನಾಯಕಿ ಚಾರ್ಲಿ ಡೀನ್ ಒಂದು ಸ್ಥಾನ ಮೇಲಕ್ಕೇರಿ ಏಕದಿನ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಮೂರು ವಿಕೆಟ್ಗಳನ್ನು ಪಡೆದ ನಂತರ ಏಕದಿನ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಎರಡು ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ಹಂಚಿಕೊಂಡಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್: ಟಾಪ್-5ರಲ್ಲಿ ಮಂಧಾನ
ಈಗ ನಡೆಯುತ್ತಿರುವ ಏಶ್ಯ ಕಪ್ನಲ್ಲಿ ಹಾಂಕಾಂಗ್ ವಿರುದ್ಧ 124 ರನ್ ಗಳಿಸಿದ್ದ ಸ್ಮೃತಿ ಮಂಧಾನ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಟಾಪ್-5ರಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡರು. 18ನೇ ಅಂತರ್ರಾಷ್ಟ್ರೀಯ ಶತಕ ಗಳಿಸಿದ್ದ ಮಂಧಾನ ನಾಲ್ಕನೇ ಸ್ಥಾನದಲ್ಲಿರುವ ವೆಸ್ಟ್ಇಂಡೀಸ್ನ ಹೇಲಿ ಮ್ಯಾಥ್ಯೂಸ್ಗಿಂತ ಕೇವಲ 13 ಅಂಕಗಳಿಂದ ಹಿಂದಿದ್ದಾರೆ.






