ಮಹಿಳೆಯರ ಟಿ-20 ರ್ಯಾಂಕಿಂಗ್ | ಮೊದಲ ಬಾರಿ ಅಗ್ರಸ್ಥಾನಕ್ಕೇರಿದ ದೀಪ್ತಿ ಶರ್ಮಾ, ಜೆಮಿಮಾಗೆ ಐದು ಸ್ಥಾನ ಭಡ್ತಿ

ದೀಪ್ತಿ ಶರ್ಮಾ | Photo Credit ; PTI
ಹೊಸದಿಲ್ಲಿ, ಡಿ.23: ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ಮಹಿಳೆಯರ ಐಸಿಸಿ ಟಿ-20 ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾದ ನಾಯಕಿ ಲೌರಾ ವೊಲ್ವಾರ್ಟ್ ಮಹಿಳೆಯರ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನವನ್ನು ಮತ್ತೆ ಪಡೆದಿದ್ದಾರೆ.
ಕಳೆದ ತಿಂಗಳು ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿಯನ್ನು ಪಡೆದಿದ್ದ ದೀಪ್ತಿ ಅವರು ಶ್ರೀಲಂಕಾ ವಿರುದ್ಧ ರವಿವಾರ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದರು. ಆ ಒಂದು ವಿಕೆಟ್ ನಿಂದಾಗಿ 737 ಅಂಕ ಗಳಿಸಿದ ದೀಪ್ತಿ ಆಸ್ಟ್ರೇಲಿಯಾದ ವೇಗದ ಬೌಲರ್ ಅನಬೆಲ್ ಸದರ್ಲ್ಯಾಂಡ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದರು.
ಮತ್ತೊಂದೆಡೆ, ವೊಲ್ವಾರ್ಟ್ ಸ್ವದೇಶದಲ್ಲಿ ಐರ್ಲ್ಯಾಂಡ್ ವಿರುದ್ಧ ನಡೆದ ಸರಣಿಯ ಎರಡನೇ ಹಾಗೂ ಮೂರನೇ ಪಂದ್ಯಗಳಲ್ಲಿ ಕ್ರಮವಾಗಿ 124 ಮತ್ತು ಔಟಾಗದೆ 100 ರನ್ ಗಳಿಸಿದರು. ಈ ಮೂಲಕ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ವಿರುದ್ಧ 9 ಅಂಕಗಳ ಮುನ್ನಡೆ ಸಾಧಿಸಿ ಜೀವನಶ್ರೇಷ್ಠ 820 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿದ್ದಾರೆ.
ವಿಶಾಖಪಟ್ಟಣದಲ್ಲಿ 44 ಎಸೆತಗಳಲ್ಲಿ ಔಟಾಗದೆ 69 ರನ್ ಗಳಿಸಿ ಭಾರತ ತಂಡದ ಗೆಲುವಿಗೆ ನೆರವಾದ ಹಾಗೂ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದ ಜೆಮಿಮಾ ರೊಡ್ರಿಗ್ಸ್ ಐದು ಸ್ಥಾನಗಳ ಭಡ್ತಿ ಪಡೆದು ಟಿ-20 ಬ್ಯಾಟರ್ಗಳ ಪೈಕಿ 9ನೇ ರ್ಯಾಂಕ್ ಪಡೆದಿದ್ದಾರೆ.
ಅದೇ ಪಂದ್ಯದಲ್ಲಿ 39 ರನ್ ಗಳಿಸಿದ್ದ ಶ್ರೀಲಂಕಾದ ಆರಂಭಿಕ ಆಟಗಾರ್ತಿ ವಿಶ್ಮಿ ಗುಣರತ್ನೆ ಆರು ಸ್ಥಾನ ಮೇಲಕ್ಕೇರಿ 64ನೇ ರ್ಯಾಂಕ್ ಗೆ ತಲುಪಿದ್ದಾರೆ.







