ICC Women's T20 World Cup | ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ

Photo Credit : PTI
ಬರ್ಮಿಂಗ್ಹ್ಯಾಮ್, ಜೂ. 14: ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (68 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಅರ್ಧಶತಕ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮಾ (5–10) ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಮಹಿಳೆಯರ ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 64 ರನ್ ಗಳಿಂದ ಮಣಿಸಿದೆ.
ರವಿವಾರ ನಡೆದ ಆರನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
3.2 ಓವರ್ ಗಳಲ್ಲಿ 18 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವು ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಗೆಲುವಿಗೆ 171 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ದೀಪ್ತಿ ಶರ್ಮಾ ಹಾಗೂ ಶ್ರೀ ಚರಣಿ (3–21) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 17 ಓವರ್ ಗಳಲ್ಲಿ ಕೇವಲ 106 ರನ್ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.
ಪಾಕಿಸ್ತಾನದ ಪರ ಆರಂಭಿಕ ಆಟಗಾರ್ತಿ ಮುನೀಬಾ ಅಲಿ (41 ರನ್, 35 ಎಸೆತ) ಗರಿಷ್ಠ ಸ್ಕೋರ್ ದಾಖಲಿಸಿದರು. ಉಳಿದ ಬ್ಯಾಟರ್ಗಳು ವಿಫಲರಾದರು.
ಭಾರತ ತಂಡವು ಶೆಫಾಲಿ ವರ್ಮಾ (6), ಜೆಮಿಮಾ ರೋಡ್ರಿಗ್ಸ್ (1) ಹಾಗೂ ಭಾರತಿ (1) ಅವರ ವಿಕೆಟ್ಗಳನ್ನು ಬೇಗ ಕಳೆದುಕೊಂಡಿತು.
ನಾಯಕಿ ಹರ್ಮನ್ಪ್ರೀತ್ ಕೌರ್ (36 ರನ್, 35 ಎಸೆತ), ವಿಕೆಟ್ ಕೀಪರ್ ರಿಚಾ ಘೋಷ್ (34 ರನ್, 17 ಎಸೆತ) ಹಾಗೂ ದೀಪ್ತಿ ಶರ್ಮಾ (ಔಟಾಗದೆ 12, 9 ಎಸೆತ) ಭಾರತ ತಂಡದ ಮೊತ್ತವನ್ನು 170ಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಪಾಕಿಸ್ತಾನದ ಪರ ಫಾತಿಮಾ ಸನಾ (2–31) ಹಾಗೂ ಸಾದಿಯಾ ಇಕ್ಬಾಲ್ (2–41) ತಲಾ ಎರಡು ವಿಕೆಟ್ ಪಡೆದರು.






