ಮಹಿಳೆಯರ ಟ್ವೆಂಟಿ-20 ಬ್ಯಾಟಿಂಗ್ ರ್ಯಾಂಕಿಂಗ್ :ಅಗ್ರ-10ಕ್ಕೆ ಹರ್ಮನ್ಪ್ರೀತ್ ಕೌರ್ ವಾಪಸ್

ದುಬೈ: ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಟಿ-20ಯಲ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾದ ಐಸಿಸಿ ಮಹಿಳೆಯರ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಮತ್ತೊಮ್ಮೆ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
115 ರನ್ ಚೇಸಿಂಗ್ ವೇಳೆ 35 ಎಸೆತಗಳಲ್ಲಿ ಔಟಾಗದೆ 54 ರನ್ ಗಳಿಸಿದ ಕೌರ್ 4 ಸ್ಥಾನ ಭಡ್ತಿ ಪಡೆದು 10ನೇ ಸ್ಥಾನ ಪಡೆದರು.
784 ರೇಟಿಂಗ್ ಪಾಯಿಂಟ್ಸ್ನೊಂದಿಗೆ ತಹ್ಲಿಯಾ ಮೆಕ್ಗ್ರಾತ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಸಹ ಆಟಗಾರ್ತಿ ಬೆತ್ಮೂನಿ (777), ಸ್ಮತಿ ಮಂಧಾನ(728), ಸೋಫಿ ಡಿವೈನ್(683) ಹಾಗೂ ಬೇಟ್ಸ್(677) ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.ಮೊದಲ ಟಿ-20 ಪಂದ್ಯದಲ್ಲಿ 14 ರನ್ ನೀಡಿ ಮಿತವ್ಯಯಿ ಎನಿಸಿದ್ದ ದೀಪ್ತಿ ಶರ್ಮಾ ಬೌಲರ್ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ನ್ಯೂಝಿಲ್ಯಾಂಡ್ ಸ್ಟಾರ್ ಸುಝಿ ಬೇಟ್ಸ್ ಶ್ರೀಲಂಕಾದ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 44 ಹಾಗೂ 52 ರನ್ ಗಳಿಸಿದ ನಂತರ ಮೂರು ಸ್ಥಾನ ಭಡ್ತಿ ಪಡೆದು ಐದನೇ ಸ್ಥಾನ ತಲುಪಿದ್ದಾರೆ.ಐರ್ಲ್ಯಾಂಡ್ ವಿರುದ್ಧ ಬ್ಯಾಟ್ ಹಾಗೂ ಬಾಲ್ನಲ್ಲಿ ಕಾಣಿಕೆ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್ ಐದು ಸ್ಥಾನ ಭಡ್ತಿ ಪಡೆದು 17ನೇ ರ್ಯಾಂಕಿಗೆ ತಲುಪಿದ್ದಾರೆ.





