ಮಹಿಳೆಯರ ವಿಶ್ವಕಪ್: ಹೀದರ್ ನೈಟ್ ಶತಕ, ಭಾರತ ವಿರುದ್ಧ ಇಂಗ್ಲೆಂಡ್ ಗೆ ರೋಚಕ ಜಯ

Photo: PTI
ಇಂದೋರ್, ಅ.19: ಐಸಿಸಿ ಮಹಿಳೆಯರ ವಿಶ್ವಕಪ್ನ 20ನೇ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಹೀದರ್ ನೈಟ್ ಬಾರಿಸಿದ ಶತಕದ(109 ರನ್)ನೆರವಿನಿಂದ ಆತಿಥೇಯ ಭಾರತ ವಿರುದ್ಧ 4 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ.
ರವಿವಾರ ಇಂಗ್ಲೆಂಡ್ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 288 ರನ್ ಗಳಿಸಿತು. ಗೆಲ್ಲಲು 289 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 284 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತದ ಪರ ಸ್ಮತಿ ಮಂಧಾನ(88 ರನ್,94 ಎಸೆತ, 8 ಬೌಂಡರಿ), ನಾಯಕಿ ಹರ್ಮನ್ಪ್ರೀತ್ ಕೌರ್(70 ರನ್, 70 ಎಸೆತ, 10 ಬೌಂಡರಿ) ಹಾಗೂ ದೀಪ್ತಿ ಶರ್ಮಾ(50 ರನ್, 57 ಎಸೆತ, 5 ಬೌಂಡರಿ)ಅರ್ಧಶತಕದ ಕೊಡುಗೆ ನೀಡಿದರು.
ಭಾರತವು 42 ರನ್ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ 3ನೇ ವಿಕೆಟ್ಗೆ 125 ರನ್ ಜೊತೆಯಾಟ ನಡೆಸಿದ ಹರ್ಮನ್ಪ್ರೀತ್ ಹಾಗೂ ಮಂಧಾನ ತಂಡವನ್ನು ಆಧರಿಸಿದರು. ಹರ್ಮನ್ಪ್ರೀತ್ ಔಟಾದ ನಂತರ ಮಂಧಾನ ಹಾಗೂ ದೀಪ್ತಿ ಶರ್ಮಾ 4ನೇ ವಿಕೆಟ್ಗೆ 67 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಯತ್ನಿಸಿದರು.
ಇಂಗ್ಲೆಂಡ್ ಪರ ನ್ಯಾಟ್ ಸಿವೆರ್-ಬ್ರಂಟ್(2-47)ಯಶಸ್ವಿ ಪ್ರದರ್ಶನ ನೀಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕಿ ಬ್ರಂಟ್ ನಿರ್ಧಾರವನ್ನು ಸಮರ್ಥಿಸಿದ ಆರಂಭಿಕ ಆಟಗಾರ್ತಿಯರಾದ ಟ್ಯಾಮಿ ಬ್ಯೂಮಂಟ್(22 ರನ್)ಹಾಗೂ ಎಮಿ ಜೋನ್ಸ್(56 ರನ್)ಮೊದಲ ವಿಕೆಟ್ಗೆ 73 ರನ್ಗಳ ಜೊತೆಯಾಟ ನಡೆಸಿದರು. ಈ ಪೈಕಿ ಜೋನ್ಸ್ ಆಕರ್ಷಕ ಅರ್ಧಶತಕ ಗಳಿಸಿದರೆ, ನಾಯಕಿ ಬ್ರಂಟ್ 38 ರನ್ಗಳ ಕೊಡುಗೆ ನೀಡಿದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಭಾರತೀಯ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಹೀದರ್ ನೈಟ್ 91 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 109 ರನ್ ಗಳಿಸಿ ಅಬ್ಬರಿಸಿದರು. ಇದು ಏಕದಿನ ಕ್ರಿಕೆಟ್ನಲ್ಲಿ 3ನೇ ಹಾಗೂ ಏಕದಿನ ವಿಶ್ವಕಪ್ನಲ್ಲಿ ಹೀದರ್ ಗಳಿಸಿದ 2ನೇ ಶತಕವಾಗಿದೆ.
ಭಾರತದ ಪರ ದೀಪ್ತಿ ಶರ್ಮಾ(4-51)ಯಶಸ್ವಿ ಪ್ರದರ್ಶನ ನೀಡಿದರು. ಮಾತ್ರವಲ್ಲ ಏಕದಿನ ಕ್ರಿಕೆಟ್ನಲ್ಲಿ 150 ವಿಕೆಟ್ ಕಬಳಿಸಿದ ಭಾರತದ 2ನೇ ಬೌಲರ್ ಎನಿಸಿಕೊಂಡರು.
ಭಾರತವು ಸೆಮಿ ಫೈನಲ್ ರೇಸ್ನಲ್ಲಿರಬೇಕಾದರೆ ಉಳಿದಿರುವ 3 ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 50 ಓವರ್ಗಳಲ್ಲಿ 288/8
(ಹೀದರ್ ನೈಟ್ 109, ಆ್ಯಮಿ ಜೋನ್ಸ್ 56, ಬ್ರಂಟ್ 38, ದೀಪ್ತಿ ಶರ್ಮಾ 4-51, ಶ್ರೀ ಚರಣಿ 2-68)
*ಭಾರತ 262/6, ಮಂಧಾನ, ಹರ್ಮನ್ಪ್ರೀತ್, ದೀಪ್ತಿ ಅರ್ಧಶತಕ
ಭಾರತ: 50 ಓವರ್ಗಳಲ್ಲಿ 284/6
(ಸ್ಮತಿ ಮಂಧಾನ 88, ಹರ್ಮನ್ಪ್ರೀತ್ 70, ದೀಪ್ತಿ ಶರ್ಮಾ 41, ಬ್ರಂಟ್ 2-47)







