ವಿಶ್ವ ಆರ್ಚರಿ ಚಾಂಪಿಯನ್ಶಿಪ್: 17ರ ಹರೆಯದ ಅದಿತಿ ಸ್ವಾಮಿ ಸೀನಿಯರ್ ವಿಶ್ವ ಚಾಂಪಿಯನ್
ಕಂಚು ಗೆದ್ದ ಜ್ಯೋತಿ

ಅದಿತಿ ಸ್ವಾಮಿ. | Photo: Twitter/@worldarchery
ಹೊಸದಿಲ್ಲಿ: ಬರ್ಲಿನ್ ನಲ್ಲಿ ಶನಿವಾರ ನಡೆದ ವಿಶ್ವ ಆರ್ಚರಿ ಚಾಂಪಿಯನ್ಶಿಪ್ ನ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಭಾರತದ ಅದಿತಿ ಸ್ವಾಮಿ ಹಾಗೂ ಜ್ಯೋತಿ ಸುರೇಖಾ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು.
ಎರಡು ತಿಂಗಳ ಹಿಂದೆಯಷ್ಟೇ ಜೂನಿಯರ್ ವಿಶ್ವ ಪ್ರಶಸ್ತಿಯನ್ನು ಜಯಿಸಿದ್ದ 17ರ ಹರೆಯದ ಅದಿತಿ ಫೈನಲ್ ಹಣಾಹಣಿಯಲ್ಲಿ ಮೆಕ್ಸಿಕೊದ ಆ್ಯಂಡ್ರಿಯ ಬೆಸೆರಾರನ್ನು 149-147 ಅಂತರದಿಂದ ಮಣಿಸಿದರು. ಸೀನಿಯರ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಮೊದಲ ಬಿಲ್ಲುಗಾರ್ತಿ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ಸತಾರದ ಅದಿತಿ ಜುಲೈನಲ್ಲಿ ಲಿಮೆರಿಕ್ನಲ್ಲಿ ನಡೆದ ಯುತ್ ಚಾಂಪಿಯನ್ಶಿಪ್ ನಲ್ಲಿ ಅಂಡರ್-18 ಪ್ರಶಸ್ತಿ ಜಯಿಸಿದ್ದರು.
ಹಿರಿಯರ ಮಟ್ಟದಲ್ಲಿ ಪ್ರಶಸ್ತಿ ಜಯಿಸಿ ತನ್ನ ವೃತ್ತಿಜೀವನದಲ್ಲಿ ಮತ್ತೊಂದು ಸಾಧನೆ ಮಾಡಿದರು. ಶುಕ್ರವಾರ ಪರ್ನೀತ್ ಕೌರ್ ಹಾಗೂ ಜ್ಯೋತಿ ಸುರೇಖಾ ಜೊತೆಗೂಡಿ ಕಾಂಪೌಂಡ್ ಮಹಿಳಾ ಟೀಮ್ ಫೈನಲ್ ನಲ್ಲಿ ಮೊತ್ತ ಮೊದಲ ಬಾರಿ ವಿಶ್ವ ಆರ್ಚರಿ ಚಾಂಪಿಯನ್ಶಿಪ್ ನಲ್ಲಿ ಚಿನ್ನ ಗೆಲ್ಲುವಲ್ಲಿಯೂ ಅದಿತಿ ಪ್ರಮುಖ ಪಾತ್ರವಹಿಸಿದ್ದಾರೆ.
ಇದಕ್ಕೂ ಮೊದಲು ಇಬ್ಬರು ಭಾರತೀಯರ ನಡುವೆ ನಡೆದ ಸೆಮಿ ಫೈನಲ್ ನಲ್ಲಿ 17ರ ಹರೆಯದ ಅದಿತಿ, ಜ್ಯೋತಿ ಅವರನ್ನು 149-145 ಅಂತರದಿಂದ ಮಣಿಸಿದರು. ಈ ಸೋಲಿನ ನಿರಾಶೆಯಿಂದ ಬೇಗನೆ ಹೊರ ಬಂದ ಜ್ಯೋತಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಟರ್ಕಿಯ ಇಪೆಕ್ ಟೊಮ್ರುಕ್ರನ್ನು 150-146 ಅಂತರದಿಂದ ಸೋಲಿಸಿದರು.