ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲು ಭಾರತದ ರಿಲೇ ತಂಡಗಳು ವಿಫಲ

Photo Credit: AFI
ಹೊಸದಿಲ್ಲಿ: ವಿಶ್ವ ಅತ್ಲೆಟಿಕ್ಸ್ ರಿಲೇಯಲ್ಲಿ ಭಾರತದ ಅಭಿಯಾನ ನಿರಾಶಾದಾಯಕವಾಗಿ ಅಂತ್ಯವಾಗಿದೆ. ಈ ವರ್ಷಾಂತ್ಯದಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯುವಲ್ಲಿ ಪುರುಷರ 4*400 ಮೀ. ಹಾಗೂ ಮಿಕ್ಸೆಡ್ 4*400ಮೀ. ತಂಡಗಳು ವಿಫಲವಾಗಿವೆ.
ಸಂತೋಷ್ ಕುಮಾರ್ ತಮಿಳರಸನ್, ರೂಪಲ್ ಚೌಧರಿ, ತೆನ್ನರಸು ವಿಶಾಲ್ ಹಾಗೂ ಶುಭಾ ವೆಂಕಟೇಶನ್ ಅವರನ್ನೊಳಗೊಂಡ ಪುರುಷರ 4*400 ಮೀ. ತಂಡವು ಹೀಟ್ 2ರಲ್ಲಿ 3 ನಿಮಿಷ, 14.81 ಸೆಕೆಂಡ್ನಲ್ಲಿ ಗುರಿ ತಲುಪಿ 4ನೇ ಸ್ಥಾನ ಪಡೆಯಿತು.
ಎರಡು ಹೀಟ್ಗಳ ಅಗ್ರ ಮೂರು ತಂಡಗಳು ಜಪಾನಿನ ರಾಜಧಾನಿಯಲ್ಲಿ ಸೆಪ್ಟಂಬರ್ 13 ರಿಂದ 21ರ ತನಕ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲಿದೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ ಭಾರತೀಯರು 3:16.85 ಸೆಕೆಂಡ್ನಲ್ಲಿ ಗುರಿ ತಲುಪಿ ಹೀಟ್-3ರಲ್ಲಿ 5ನೇ ಸ್ಥಾನ ಪಡೆದರು. ರವಿವಾರ ಮತ್ತೊಂದು ಅವಕಾಶ ಪಡೆದರೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾದರು.
ಶನಿವಾರ 8 ತಂಡಗಳು ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಪುರುಷರ 4-400 ಮೀ. ಕ್ವಾರ್ಟರ್ನಲ್ಲಿ ಜಯ ಕುಮಾರ್, ಧರ್ಮವೀರ ಚೌಧರಿ, ಟಿ. ಸಾಜಿ ಮನು ಹಾಗೂ ರಿನ್ಸ್ ಜೋಸೆಫ್ 3:04.49 ಸೆಕೆಂಡ್ನಲ್ಲಿ ಗುರಿ ತಲುಪಿ 7ನೇ ಸ್ಥಾನ ಪಡೆದರು.
ಶನಿವಾರ ಭಾರತೀಯ ಪುರುಷರ 4*400 ಮೀ. ಟೀಮ್ ತನ್ನ ಹೀಟ್ನಲ್ಲಿ 3:03.92 ಸೆಕೆಂಡ್ನಲ್ಲಿ ಗುರಿ ತಲುಪಿ 5ನೇ ಸ್ಥಾನ ಪಡೆದಿದೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಥಾನ ಪಡೆಯಲು ರವಿವಾರ ಮತ್ತೊಂದು ಅವಕಾಶ ಪಡೆದಿದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.
ಪುರುಷರ ಹಾಗೂ ಮಹಿಳೆಯರ 4*100 ಮೀ. ಹಾಗೂ 4*400 ಮೀ., ಮಿಕ್ಸೆಡ್ 4*400 ಮೀ.ನ ಅಗ್ರ 14 ತಂಡಗಳು ಟೋಕಿಯೊ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ತನ್ನ ಸ್ಥಾನ ಪಡೆದಿವೆ.
2023ರಲ್ಲಿ ಹಂಗೇರಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತವು ಪುರುಷರ 4*400 ಮೀ.ನಲ್ಲಿ ಸ್ಪರ್ಧಿಸಿತ್ತು. ಹೀಟ್ನಲ್ಲಿ 2ನೇ ಸ್ಥಾನ ಪಡೆದು, ಏಶ್ಯನ್ ದಾಖಲೆ(2:59.05)ಯನ್ನು ನಿರ್ಮಿಸಿರುವ ಭಾರತದ ಓಟಗಾರರು ಅಮೆರಿಕ ತಂಡಕ್ಕೆ ಭೀತಿ ಹುಟ್ಟಿಸಿದ್ದರು.
ಮುಹಮ್ಮದ್ ಅನಸ್, ಅಮೋಜ್ ಜೇಕಬ್, ರಾಜೇಶ್ ರಮೇಶ್ ಹಾಗೂ ಮುಹಮ್ಮದ್ ಅಜ್ಮಲ್ ಫೈನಲ್ನಲ್ಲಿ 5ನೇ ಸ್ಥಾನ ಪಡೆದಿದ್ದರು. ಇದೇ ತಂಡವು ಹೀಟ್ ರೇಸ್ನಲ್ಲಿ 4ನೇ ಸ್ಥಾನ ಪಡೆದು 2024ರ ಪ್ಯಾರಿಸ್ ಒಲಿಂಪಿಕ್ಸ್ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
2023ರ ವಿಶ್ವ ಚಾಂಪಿಯನ್ಶಿಪ್ ಹಾಗೂ 2024ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳನ್ನು ಕೈಬಿಟ್ಟಿದ್ದ ಭಾರತವು ಪುರುಷರ 4*400 ಮೀ. ರಿಲೇಯಲ್ಲಿ ಹೊಸ ತಂಡವನ್ನು ಕಣಕ್ಕಿಳಿಸಿತ್ತು.







