ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ | ಐತಿಹಾಸಿಕ ಪದಕದಿಂದ ವಂಚಿತರಾದ ಧ್ರುವ್-ತನಿಶಾ ಜೋಡಿ

ಧ್ರುವ್-ತನಿಶಾ | PTI
ಪ್ಯಾರಿಸ್, ಆ.29: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಧ್ರುವ ಕಪಿಲಾ ಹಾಗೂ ತನಿಶಾ ಕ್ರಾಸ್ಟೊ ಐತಿಹಾಸಿಕ ಮಿಕ್ಸೆಡ್ ಡಬಲ್ಸ್ ಪದಕ ಗೆಲ್ಲುವುದರಿಂದ ವಂಚಿತರಾದರು.
ವಿಶ್ವ ಚಾಂಪಿಯನ್ ಶಿಪ್:ನಲ್ಲಿ ದೇಶಕ್ಕೆ ಮೊತ್ತ ಮೊದಲ ಬಾರಿ ಪದಕ ಗೆಲ್ಲುವ ಗುರಿಯೊಂದಿಗೆ ಶುಕ್ರವಾರ ಕಣಕ್ಕಿಳಿದ ಭಾರತದ ಜೋಡಿ ಧ್ರುವ ಹಾಗೂ ತನಿಶಾ ಕ್ವಾರ್ಟರ್ ಫೈನಲ್ನಲ್ಲಿ ಮಲೇಶ್ಯದ ವಿಶ್ವದ ನಂ.4ನೇ ಜೋಡಿ ಚೆನ್ ಟಾಂಗ್ ಜೀ ಹಾಗೂ ಟೊ ಇ ವೀ ವಿರುದ್ಧ 37 ನಿಮಿಷಗಳಲ್ಲಿ 15-21, 13-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಸೆಮಿ ಫೈನಲ್ ಗೆ ಪ್ರವೇಶಿಸಿರುವ ಮಲೇಶ್ಯದ ಜೋಡಿ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದೆ.
ವಿಶ್ವದ ನಂ.5 ಜೋಡಿ ಹಾಂಕಾಂಗ್ ನ ಟಾಂಗ್ ಚುನ್ ಮಾನ್ ಹಾಗೂಸೆ ಯಿಂಗ್ ಸುಯೆಟ್ರನ್ನು 19-21, 21-12, 21-15 ಗೇಮ್ಗಳ ಅಂತರದಿಂದ ಮಣಿಸಿರುವ ಧ್ರುವ ಹಾಗೂ ತನಿಶಾ ಅವರು ಅಂತಿಮ-8ರ ಸುತ್ತು ಪ್ರವೇಶಿಸಿದ್ದರು.
ಆದರೆ ವಿಶ್ವದ ನಂ.17ನೇ ಜೋಡಿ ಧ್ರುವ ಹಾಗೂ ತನಿಶಾ ಮಲೇಶ್ಯದ ಜೋಡಿಯ ಎದುರು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿನ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ವಿಫಲರಾದರು.
ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ. ಸಿಂಧು ಇಂಡೋನೇಶ್ಯದ ಪುತ್ರಿ ಕುಸುಮಾರನ್ನು ಎದುರಿಸಿದರೆ, ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಕ್ವಾರ್ಟರ್ ಫೈನಲ್ ನಲ್ಲಿ ಮಲೇಶ್ಯದ ಆ್ಯರೊನ್ ಚಿಯಾ ಹಾಗೂ ಸೊಹ್ ವೂ ಯಿಕ್ ರನ್ನು ಎದುರಿಸಲಿದ್ದಾರೆ.







