ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ | ಟ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್ ಸೆಮಿ ಫೈನಲ್ಗೆ, ಪದಕ ಖಚಿತ

ಟ್ರೀಸಾ ಜೋಲಿ , ಗಾಯತ್ರಿ | Photo Credit : X
ಹೊಸದಿಲ್ಲಿ: ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಶುಕ್ರವಾರ ಚೀನಾದ ಜಿಯಾ ಯಿ ಫ್ಯಾನ್ ಹಾಗೂ ಝಾಂಗ್ ಶು ಕ್ಸಿಯಾನ್ರನ್ನು ಮಣಿಸಿದ ಭಾರತದ ಆಟಗಾರ್ತಿಯರಾದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಪದಕವನ್ನು ದೃಢಪಡಿಸಿದರು.
ಶ್ರೇಯಾಂಕರಹಿತ ಭಾರತೀಯ ಜೋಡಿಯು 69 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಚೀನಾದ ಎದುರಾಳಿಯನ್ನು 16-21, 21-15, 21-13 ಗೇಮ್ಗಳ ಅಂತರದಿಂದ ಮಣಿಸುವುದರೊಂದಿಗೆ ಅಂತಿಮ-4ರ ಘಟ್ಟ ತಲುಪಿದರು. ಈ ಗೆಲುವಿನ ಮೂಲಕ ಟ್ರೀಸಾ ಹಾಗೂ ಗಾಯತ್ರಿ ಅವರು ಚಾಂಪಿಯನ್ಶಿಪ್ನಲ್ಲಿ ಕನಿಷ್ಠ ಕಂಚಿನ ಪದಕವನ್ನು ಖಾತ್ರಿಪಡಿಸಿದರು.
ಭಾರತೀಯ ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಟ್ರೀಸಾ ಹಾಗೂ ಗಾಯತ್ರಿ ಅವರ ಸಾಧನೆ ಅತ್ಯಂತ ಮಹತ್ವದ್ದಾಗಿದೆ. ಭಾರತವು 2011ರಲ್ಲಿ ವಿಶ್ವ ಚಾಂಪಿಯನ್ಶಿಪ್ನ ಮಹಿಳೆಯರ ಡಬಲ್ಸ್ನಲ್ಲಿ ಕೊನೆಯ ಬಾರಿ ಪದಕ ಜಯಿಸಿತ್ತು. ಆಗ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಲಂಡನ್ನಲ್ಲಿ ನಡೆದಿದ್ದ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸಿದ್ದರು.
ತವರಿನ ಪ್ರೇಕ್ಷಕರ ಭಾರೀ ಬೆಂಬಲದೊಂದಿಗೆ ಟ್ರೀಸಾ ಹಾಗೂ ಗಾಯತ್ರಿ ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡರು. ಕ್ರಮೇಣವಾಗಿ ಸ್ಪರ್ಧೆಯಲ್ಲಿ ಹಿಡಿತ ಸಾಧಿಸಿದರು. ಆರಂಭಿಕ ಗೇಮ್ ಅನ್ನು 16-21ರಿಂದ ಸೋತ ನಂತರ ಭಾರತೀಯ ಜೋಡಿಯು ತನ್ನ ಆಕ್ರಮಣಕಾರಿ ಆಟವನ್ನು ಚುರುಕುಗೊಳಿಸಿತು. ತಮ್ಮ ಸ್ಮ್ಯಾಶ್ಗಳ ಮೂಲಕ ಉತ್ತಮ ಯಶಸ್ಸು ಗಳಿಸಿದರು.
ಅಂತರ್ರಾಷ್ಟ್ರೀಯ ವಲಯದಲ್ಲಿ ಈಗಾಗಲೇ ಯಶಸ್ಸನ್ನು ಕಂಡಿರುವ ಟ್ರೀಸಾ ಹಾಗೂ ಗಾಯತ್ರಿ ಜೋಡಿ ಸೆಮಿ ಫೈನಲ್ಗೆ ತಲುಪುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದರು.
ಟ್ರೀಸಾ ಹಾಗೂ ಗಾಯತ್ರಿ 2022ಹಾಗೂ 2023ರಲ್ಲಿ ಸತತ ವರ್ಷಗಳಲ್ಲಿ ಆಲ್ ಇಂಗ್ಲೆಂಡ್ ಓಪನ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ. 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕೂಡ ಕಂಚಿನ ಪದಕ ಜಯಿಸಿದ್ದರು. ಕಳೆದ ವರ್ಷದ ಆರಂಭದಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಟಾಪ್-10ರಲ್ಲಿ ಸ್ಥಾನ ಪಡೆದಿದ್ದರು.
ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಹಾಗೂ ಉಬೆರ್ ಕಪ್ಗಿಂತ ಮೊದಲು ತರಬೇತಿಯ ಅವಧಿಯಲ್ಲಿ ಟ್ರೀಸಾ ಗಂಭೀರ ಮೊಣಕಾಲು ಗಾಯಕ್ಕೆ ಒಳಗಾದ ನಂತರ ಈ ವರ್ಷಾರಂಭದಲ್ಲಿ ಟ್ರೀಸಾ-ಗಾಯತ್ರಿ ಯಶಸ್ಸಿನ ಓಟಕ್ಕೆ ಅಡೆತಡೆ ಎದುರಾಗಿತ್ತು.
ಯು.ಎಸ್. ಓಪನ್ನಲ್ಲಿ ಸ್ಪರ್ಧಿಸುವ ಮೊದಲು ಟ್ರೀಸಾ-ಗಾಯತ್ರಿ ಜೋಡಿಯು ಇಂಡೋನೇಶ್ಯ ಓಪನ್ನಲ್ಲಿ ಆಡುವ ಮೂಲಕ ಬ್ಯಾಡ್ಮಿಂಟನ್ಗೆ ಮರಳಿತ್ತು. ಆ ನಂತರ ಈ ತಿಂಗಳಾರಂಭದಲ್ಲಿ ಫಿಲಿಪ್ಪೈನ್ ಅಂತರ್ರಾಷ್ಟ್ರೀಯ ಚಾಲೆಂಜ್ನಲ್ಲಿ ಜಯಶಾಲಿಯಾಗಿ ಶ್ರೇಷ್ಠ ಫಾರ್ಮ್ಗೆ ಮರಳಿದ ಸೂಚನೆ ನೀಡಿದರು.
ಇದೀಗ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿರುವ ಟ್ರೀಸಾ ಹಾಗೂ ಗಾಯತ್ರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವುದನ್ನು ದೃಢಪಡಿಸಿದ್ದಾರೆ.






