ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್; ವಿಶ್ವದ ನಂ.1 ಆಟಗಾರ ವಿಕ್ಟರ್ಗೆ ಸೋಲುಣಿಸಿ ಸೆಮಿ ಫೈನಲ್ ತಲುಪಿದ ಪ್ರಣಯ್

Photo: twitter/SportsgramIndia
ಹೊಸದಿಲ್ಲಿ: ಕೋಪನ್ಹೇಗನ್ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಎಚ್.ಎಸ್.ಪ್ರಣಯ್ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ರನ್ನು 13-21, 21-15, 21-16 ಗೇಮ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸೆಮಿ ಫೈನಲ್ಗೆ ಪ್ರವೇಶಿಸಿದರು.
ಭಾರತವು 10 ವರ್ಷಗಳ ನಂತರ ಬರಿಗೈಯಲ್ಲಿ ವಾಪಸಾಗುವ ಲಕ್ಷಣ ಕಾಣಿಸಿಕೊಂಡಿತ್ತು. ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ವಿರುದ್ಧ ವಿಜಯ ಸಾಧಿಸಿರುವ ಪ್ರಣಯ್ ಭಾರತೀಯರ ಸ್ಫೂರ್ತಿಯನ್ನು ಹೆಚ್ಚಿಸಿದ್ದಾರೆ. ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.
ಮೊದಲ ಗೇಮ್ನಲ್ಲಿ 13-21 ಅಂತರದಿಂದ ಸೋತಿದ್ದ ಪ್ರಣಯ್ 68 ನಿಮಿಷಗಳ ಹಣಾಹಣಿಯಲ್ಲಿ ಉಳಿದೆರಡು ಗೇಮ್ಗಳನ್ನು 21-15 ಹಾಗೂ 21-16 ಅಂತರದಿಂದ ಗೆದ್ದುಕೊಂಡು ಪ್ರಾಬಲ್ಯ ಸಾಧಿಸಿದರು.
ಪ್ರಣಯ್ ಸೆಮಿ ಫೈನಲ್ನಲ್ಲಿ ಥಾಯ್ಲೆಂಡ್ನ ಕುನ್ಲವುಟ್ ವಿಟಿಡರ್ಸನ್ರನ್ನು ಎದುರಿಸಲಿದ್ದಾರೆ.
ಸಾತ್ವಿಕ್-ಚಿರಾಗ್ ಸವಾಲು ಅಂತ್ಯ
ಇದಕ್ಕೂ ಮೊದಲು ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚಾಂಪಿಯನ್ಶಿಪ್ನ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋಲುಂಡಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡನೇ ಪದಕ ಗೆಲ್ಲುವುದರಿಂದ ವಂಚಿತರಾದರು.
ಸಾತ್ವಿಕ್ ಹಾಗೂ ಚಿರಾಗ್ ಶುಕ್ರವಾರ 48 ನಿಮಿಷಗಳ ಕಾಲ ನಡೆದ ಅಂತಿಮ-8ರ ಪಂದ್ಯದಲ್ಲಿ ಡೆನ್ಮಾರ್ಕ್ನ ಕಿಮ್ ಅಸ್ಟ್ರುಪ್ ಹಾಗೂ ಆ್ಯಂಡರ್ಸ್ ಸ್ಕಾರಪ್ ರಸ್ಮುಸೆನ್ ವಿರುದ್ಧ 18-12 ಹಾಗೂ 19-21 ಅಂತರದಿಂದ ಸೋತಿದ್ದಾರೆ.







