ವಿಶ್ವಕ್ರಿಕೆಟ್ನ ಖ್ಯಾತ ವೇಗದ ಬೌಲರ್ ಈಗ ಸೂರ್ಯವಂಶಿಯ ಅಭಿಮಾನಿ !

Photo credit : ANI, PTI
ಹೊಸದಿಲ್ಲಿ: ಎಳೆ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ ವೈಭವ್ ಸೂರ್ಯವಂಶಿ ಇದೀಗ ಹೊಸ ಅಭಿಮಾನಿಯನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಖ್ಯಾತ ವೇಗದ ಬೌಲರ್ ಕಗಿಸೊ ರಬಡ ಅವರು ಈ ಯುವ ಪ್ರತಿಭೆಯ ನಿರ್ಭೀತ ಬ್ಯಾಟಿಂಗ್ಗೆ ಬೆರಗಾಗಿದ್ದಾರೆ. ಸಾಮಥ್ರ್ಯ, ಆತ್ಮವಿಶ್ವಾಸ ಹಾಗೂ ಸಹಜ ಪ್ರತಿಭೆಯನ್ನು ಒಳಗೊಂಡ ಅದ್ಭುತ ಆಟಗಾರ ಎಂದು ರಾಜಸ್ಥಾನ ರಾಯಲ್ಸ್ ತಂಡದ ಸೂರ್ಯವಂಶಿಯನ್ನು ಗುಜರಾತ್ ಟೈಟನ್ಸ್ ತಂಡದ ವೇಗಿ ಬಣ್ಣಿಸಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿ 21 ವಿಕೆಟ್ ಪಡೆದಿರುವ ರಬಡ, ಜಿಟಿ ಮತ್ತು ಆರ್ ಆರ್ ತಂಡದ ನಡುವಿನ ಪಂದ್ಯದಲ್ಲಿ 15 ವರ್ಷದ ಆಟಗಾರದಿಂದ ಅಲ್ಪಕಾಲ ದಂಡನೆಗೆ ಒಳಗಾದರು. ರಬಡ ಬೌಲಿಂಗ್ನಲ್ಲಿ ಸೂರ್ಯವಂಶಿ ನಿರ್ಭೀತಿಯಿಂದ ಬೆನ್ನು ಬೆನ್ನು ಸಿಕ್ಸರ್ ಸಿಡಿಸಿದರು. ಈ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಅಪಾಯಕಾರಿ ಯುವಕ್ರಿಕೆಟಿಗ ಎನ್ನುವುದನ್ನು ಸೂರ್ಯವಂಶಿ ದೃಢಪಡಿಸಿದ್ದಾರೆ.
ಯಾವುದೇ ಹಿಂಜರಿಕೆ ಇಲ್ಲದೇ ಬ್ಯಾಟ್ ಬೀಸುತ್ತಿರುವ ವೈಭವ್ ಈಗಾಗಲೇ ಜಸ್ಪ್ರೀತ್ ಬೂಮ್ರಾ, ಜೋಶ್ ಹೇಝಲ್ವುಡ್, ಮುಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ ಅವರಂಥ ವಿಶ್ವದರ್ಜೆಯ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಪಿಟಿಐ ಜತೆ ಮಾತನಾಡಿದ ರಬಡ, "ಇಂಥ ಚಿಕ್ಕವಯಸ್ಸಿನಲ್ಲೇ ಯುವ ಆಟಗಾರನ ಮನೋಭಾವ ಮತ್ತು ನಿರ್ಭೀತಿಯ ಪ್ರವೃತ್ತಿಗೆ ನಾನು ಮನಸೋತಿದ್ದೇನೆ" ಎಂದು ಹೇಳಿದರು.
"ಸೂರ್ಯವಂಶಿ ಅದ್ಭುತ ಪ್ರತಿಭೆ, ವೇಗದ ಕೈಗಳು, ಚಲನೆಯಲ್ಲಿ ನಿರ್ಭೀತಿ. ಅವರಲ್ಲಿ ಎಳ್ಳಷ್ಟೂ ಭೀತಿ ಕಾಣಿಸುವುದಿಲ್ಲ. ಸಾಮಾನ್ಯವಾಗಿ ಯುವಕರಲ್ಲಿ ಅದು ಇರುತ್ತದೆ. ನಿಜಕ್ಕೂ ಇದು ಅದ್ಭುತ. ಐಪಿಎಲ್ನಲ್ಲಿ ಇಂಥವರನ್ನು ನೋಡುವುದು ನಿಜಕ್ಕೂ ಶ್ರೇಷ್ಠ ಅನುಭವ" ಎಂದು ವಿಶ್ಲೇಷಿಸಿದ್ದಾರೆ.






