FIFA World Cup 2026 | ಡಚ್ ಪೊಲೀಸರೊಂದಿಗೆ ಮೊರಾಕ್ಕೊ ಅಭಿಮಾನಿಗಳ ಸಂಘರ್ಷ

Photo : africasoccer
ಬೋಸ್ಟನ್, ಜೂ.30: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಮೊರಾಕ್ಕೊ ತಂಡದ ರೋಚಕ ಗೆಲುವು ಎರಡು ದೇಶಗಳಲ್ಲಿ ವ್ಯತಿರಿಕ್ತ ದೃಶ್ಯಗಳಿಗೆ ಕಾರಣವಾಯಿತು.
ಮೊರಾಕ್ಕೊ ತಂಡವು ಅಂತಿಮ-16ರ ಸುತ್ತು ತಲುಪಿ ಇತಿಹಾಸ ನಿರ್ಮಿಸಿದ ನಂತರ, ಡಚ್ ನಗರವಾದ ಹೇಗ್ನಲ್ಲಿ ಮೊರಾಕ್ಕೊ ಫುಟ್ಬಾಲ್ ಅಭಿಮಾನಿಗಳು ಹಾಗೂ ನೆದರ್ಲ್ಯಾಂಡ್ಸ್ ಪೊಲೀಸರ ನಡುವೆ ಘರ್ಷಣೆಗಳು ಭುಗಿಲೆದ್ದವು.
ಹೆಚ್ಚುವರಿ ಸಮಯದ ನಂತರ ಪಂದ್ಯವು 1-1ರಿಂದ ಡ್ರಾ ಆಯಿತು. ಬಳಿಕ ಮೊರಾಕ್ಕೊ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು.
ನೆದರ್ಲ್ಯಾಂಡ್ಸ್ನಲ್ಲಿ ಮೊರಾಕ್ಕೊ ಸಮುದಾಯ ದೊಡ್ಡ ಪ್ರಮಾಣದಲ್ಲಿ ನೆಲೆಸಿದೆ. ಸಾವಿರಾರು ಬೆಂಬಲಿಗರು ತಡರಾತ್ರಿಯ ತನಕ ಮೊರಾಕ್ಕೊ ತಂಡದ ವಿಜಯವನ್ನು ಆಚರಿಸಿದರು. ಆದರೆ ಪೊಲೀಸರು ಮಧ್ಯಪ್ರವೇಶಿಸಿದ್ದರಿಂದ ಹೇಗ್ನ ಶಿಲ್ಡರ್ಸ್ವಿಜ್ಕ್ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಹಿಂಸಾತ್ಮಕ ಘಟನೆಗೆ ತಿರುಗಿತು.
ಸಂಭ್ರಮಾಚರಣೆಯ ವೇಳೆ ಭಾರೀ ಸುಡುಮದ್ದುಗಳನ್ನು ಸಿಡಿಸಲಾಯಿತು. ಅಧಿಕಾರಿಗಳ ಮೇಲೆ ಪಟಾಕಿ ಹಾಗೂ ಕಲ್ಲುಗಳಿಂದ ದಾಳಿ ನಡೆಸಲಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಗಲಭೆ ನಿಗ್ರಹ ಪೊಲೀಸರನ್ನು ನಿಯೋಜಿಸಲಾಯಿತು. ಜನಸಂದಣಿಯನ್ನು ಚದುರಿಸಲು ಜಲ ಫಿರಂಗಿಗಳನ್ನು ಬಳಸಲಾಯಿತು ಎಂದು ಡಚ್ ಪೊಲೀಸರು ತಿಳಿಸಿದ್ದಾರೆ.
ಬಹಿರಂಗ ಹಿಂಸಾಚಾರ ಎಸಗಿದ ಆರೋಪದ ಮೇಲೆ ಕೆಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.






