ವಿಶ್ವಕಪ್: ಸೆಮಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಚೆಸ್ ತಾರೆ ಕೊನೆರು ಹಂಪಿ

ಕೊನೆರು ಹಂಪಿ | PC : X
ಢಾಕಾ, ಜು.21: ಭಾರತದ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಅವರು ಉತ್ತಮ ಪ್ರತಿದಾಳಿ ನಡೆಸುವ ಮೂಲಕ ಚೀನಾದ ಅಂತರರಾಷ್ಟ್ರೀಯ ಮಾಸ್ಟರ್ ಯುಕ್ಸಿನ್ ಸಾಂಗ್ ಅವರನ್ನು ಮಣಿಸಿ ಫಿಡೆ ಮಹಿಳಾ ಚೆಸ್ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಗೆ ಮುನ್ನಡೆದರು.
ರವಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಕೊನೆರು ಹಂಪಿ ಅವರು ಚೀನಾದ ಆಟಗಾರ್ತಿ ಸಾಂಗ್ರನ್ನು 1.5-0.5 ಅಂಕದ ಅಂತರದಿಂದ ಮಣಿಸಿ ಈ ಸಾಧನೆ ಮಾಡಿದರು.
ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಅಂತಿಮ-4ರ ಸುತ್ತನ್ನು ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದರು.
ಬಿಳಿ ಕಾಯಿಯೊಂದಿಗೆ ಮೊದಲ ಗೇಮ್ ಅನ್ನು ಗೆದ್ದಿದ್ದ ಹಂಪಿಗೆ ಸೆಮಿ ಫೈನಲ್ ತಲುಪಲು ಕೇವಲ ಡ್ರಾ ಮಾಡಿಕೊಳ್ಳುವ ಅಗತ್ಯವಿತ್ತು. ಚೀನಾ ಆಟಗಾರ್ತಿಯ ವಿರುದ್ಧ 2ನೇ ಗೇಮ್ನಲ್ಲಿ ತೀವ್ರ ಸ್ಪರ್ಧೆಯ ವೇಳೆ ಈ ಸಾಧನೆ ಮಾಡಿದರು.
ನಾಲ್ಕನೇ ಸ್ಥಾನವನ್ನು ಖಚಿತಪಡಿಸಿರುವ ಹಂಪಿ ಅವರು ಅಗ್ರ-3 ಸ್ಥಾನಗಳನ್ನು ಪಡೆಯಲು ಎರಡು ಅವಕಾಶ ಪಡೆಯಲಿದ್ದಾರೆ. ಇದು ಮುಂದಿನ ಮಹಿಳೆಯರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ನಲ್ಲಿ ಸ್ಥಾನವನ್ನು ಖಚಿತಪಡಿಸಲು ನೆರವಾಗಲಿದೆ. ಟಾಪ್-3 ಚೆಸ್ ಆಟಗಾರ್ತಿಯರು ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ.
ಗ್ರ್ಯಾಂಡ್ ಮಾಸ್ಟರ್ ಡಿ. ಹರಿಕಾ ಹಾಗೂ ಐಎಂ ದಿವ್ಯಾ ದೇಶ್ಮುಖ್ ನಡುವಿನ ಹೋರಾಟವು 1-1ರಿಂದ ಡ್ರಾನಲ್ಲಿ ಕೊನೆಗೊಂಡಿದೆ. ಈ ಇಬ್ಬರು ಸೋಮವಾರ ಟೈ-ಬ್ರೇಕರ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.
ಗ್ರ್ಯಾಂಡ್ ಮಾಸ್ಟರ್ ಆರ್.ವೈಶಾಲಿ ಅವರು ಮಾಜಿ ವಿಶ್ವ ಚಾಂಪಿಯನ್ ರೆಂಗಿ ಟಾನ್ ಎದುರು 0.5-1.5 ಅಂತರದಿಂದ ಸೋತಿದ್ದಾರೆ.







