ವಿಶ್ವಕಪ್ನಿಂದ ಹೊರಬಿದ್ದ ಹರ್ಷಿತ್ ರಾಣಾ; ಮುಹಮ್ಮದ್ ಸಿರಾಜ್ ಗೆ ಸ್ಥಾನ

ಹರ್ಷಿತ್ ರಾಣಾ , ಮುಹಮ್ಮದ್ ಸಿರಾಜ್ | Photo Credit : PTI
ಮುಂಬೈ: ಮಂಡಿ ಗಾಯದಿಂದ ಬಳಲುತ್ತಿರುವ ಭಾರತೀಯ ಕ್ರಿಕೆಟ್ ತಂಡದ ವೇಗಿ ಹರ್ಷಿತ್ ರಾಣಾ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶುಕ್ರವಾರ ಪ್ರಕಟಿಸಿದೆ. ತಂಡದಲ್ಲಿ ಅವರ ಸ್ಥಾನವನ್ನು ಮುಹಮ್ಮದ್ ಸಿರಾಜ್ ವಹಿಸಲಿದ್ದಾರೆ.
ಮುಂಬೈಯ ಡಿವೈ ಪಾಟೀಲ್ ಸ್ಟೇಡಿಯಮ್ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಅವರು ತಾನು ಬೌಲಿಂಗ್ ಮಾಡಿದ ಒಂದೇ ಓವರ್ನಲ್ಲಿ ತನ್ನ ರನ್-ಅಪ್ನಿಂದ ಎರಡು ಬಾರಿ ಹೊರಹೋದರು. ಆ ಓವರ್ ಮುಗಿಸಿದ ಬಳಿಕ ಅವರು ಅಸ್ವಸ್ಥರಾದಂತೆ ಕಂಡರು ಹಾಗೂ ಡ್ರೆಸಿಂಗ್ ಕೋಣೆಗೆ ತನ್ನ ಬಲಮಂಡಿಯನ್ನು ಹಿಡಿದುಕೊಂಡು ಹಿಂದಿರುಗಿದರು. ಬಳಿಕ ಅವರು ಆ ಪಂದ್ಯದಲ್ಲಿ ಭಾಗವಹಿಸಲಿಲ್ಲ.
‘‘ಪರಿಣತರೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ, ಪಂದ್ಯಾವಳಿಯಲ್ಲಿ ಆಡಲು ಅವರು ಸಮರ್ಥರಾಗಿಲ್ಲ ಎಂಬ ತೀರ್ಮಾನಕ್ಕೆ ಬಿಸಿಸಿಐ ವೈದ್ಯಕೀಯ ತಂಡ ಬಂದಿದೆ. ತಂಡದಲ್ಲಿ ಅವರ ಸ್ಥಾನವನ್ನು ಮುಹಮ್ಮದ್ ಸಿರಾಜ್ ವಹಿಸಲಿದ್ದಾರೆ’’ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.




