ವಿಶ್ವಕಪ್ ಫೈನಲ್ : 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಭಾರತ
Photo : cricketworldcup.com
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಮೂರು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡಕ್ಕೆ ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ರಕ್ಷಣಾತ್ಮಕ ಆಟವಾಡುತ್ತಾ ಬಾಲ್ ಗೆ ಸರಾಸರಿ ರನ್ ರೇಟ್ ನಲ್ಲಿ ರನ್ ಪೇರಿಸುತ್ತಿದ್ದಾಗ ಮುಗ್ಗರಿಸಿದ ಶುಭಮನ್ ಗಿಲ್ 4 ರನ್ ಗಳಿಸಿ ಮಿಷೆಲ್ ಸ್ಟಾರ್ಕ್ ಓವರ್ನಲ್ಲಿ ಆಡಂ ಝಂಪಾ ಗೆ ಕ್ಯಾಚಿತ್ತು ಔಟ್ ಆದರು.
ನಂತ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಗೆ ಸಾಥ್ ನೀಡಿದರು. ಬ್ಯಾಟ್ ಬೀಸುತ್ತ ವೇಗವಾಗಿ ರನ್ ಗಳಿಸುತ್ತಿದ್ದ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್ ಗಳಿಸಿದ್ದಾಗ ಗ್ಲೆನ್ ಮ್ಯಾಕ್ಸ್ವೆಲ್ ಓವರ್ನಲ್ಲಿ ಟ್ರಾವಿಸ್ ಹೆಡ್ ಗೆ ಕ್ಯಾಚಿತ್ತರು. ರೋಹಿತ್ ವಿಕೆಟ್ ಪಡೆದ ಗ್ಲೆನ್ ಮ್ಯಾಕ್ಸ್ವೆಲ್ ವಿಶ್ವಕಪ್ನಲ್ಲಿ ತಮ್ಮ ದ್ವಿಶತಕ ಸಾಧನೆ ಮಾಡಿದಾಗ ಸಂಭ್ರಮಿಸಿದ್ದಕ್ಕಿಂತ ಹೆಚ್ಚಾಗಿಯೇ ಸಂಭ್ರಮಿಸಿದರು. ಆ ಮೂಲಕ ಭಾರತ ತಂಡಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾದರು.
ರೋಹಿತ್ ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ ಒಂದು ಬೌಂಡರಿ ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ಈಗ ಕ್ರೀಸ್ ನಲ್ಲಿ ವಿರಾಟ್ ಕೊಹ್ಲಿ 27, ಕೆ ಎಲ್ ರಾಹುಲ್ 5 ಗಳಿಸಿ ಆಟವಾಡುತ್ತಿದ್ದಾರೆ. 13.1 ಓವರ್ಗಳಲ್ಲಿ ಭಾರತ ತಂಡ 90 ರನ್ ಗೆ 3 ವಿಕೆಟ್ ಕಳೆದುಕೊಂಡಿದೆ.