ವಿಶ್ವ ನಂಬರ್ ವನ್ ಸ್ವಿಯಾಟೆಕ್ ವಿಂಬಲ್ಡನ್ ನಿಂದ ಹೊರಗೆ
3ನೇ ಸುತ್ತಿನಲ್ಲಿ ಆಘಾತಕಾರಿ ಸೋಲನುಭವಿಸಿದ ಅಗ್ರ ಶ್ರೇಯಾಂಕಿತೆ

Photo Credit: AP
ಲಂಡನ್: ವಿಶ್ವದ ನಂಬರ್ ವನ್ ಆಟಗಾರ್ತಿ ಇಗಾ ಸ್ವಿಯಾಟೆಕ್ ವಿಂಬಲ್ಡನ್ ನಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಅವರಿಗೆ ಕಝಖ್ ಸ್ತಾನದ ಯೂಲಿಯಾ ಪುಟಿನ್ಟ್ಸೇವ ಆಘಾತಕಾರಿ ಸೋಲುಣಿಸಿದರು.
ಕಳೆದ ತಿಂಗಳಷ್ಟೇ ತನ್ನ ನಾಲ್ಕನೇ ಫ್ರೆಂಚ್ ಓಪನ್ ಹಾಗೂ ಐದನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಪೋಲ್ಯಾಂಡ್ ಆಟಗಾರ್ತಿ ಸ್ವಿಯಾಟೆಕ್ ರನ್ನು ಯೂಲಿಯಾ 3-6, 6-1, 6-2 ಸೆಟ್ ಗಳಿಂದ ಸೋಲಿಸಿದರು.
ನಾಲ್ಕನೇ ಸುತ್ತಿನಲ್ಲಿ ಯೂಲಿಯಾ ಲಾತ್ವಿಯದ ಜೆಲೀನಾ ಒಸ್ಟಪೆಂಕೊರನ್ನು ಎದುರಿಸಲಿದ್ದಾರೆ.
“ರೋಮಾಂಚಕ ಅನುಭವವಾಗುತ್ತಿದೆ. ನಾನು ಎದುರಾಳಿಗೆ ಸಮಯಾವಕಾಶ ನೀಡದಂತೆ ವೇಗವಾಗಿ ಆಡುವ ಮೇಲೆ ಗಮನ ಹರಿಸಿದ್ದೆ. ಅದರಿಂದ ನನಗೆ ಪ್ರಯೋಜನವಾಗಿದೆ’’ ಎಂದು 29 ವರ್ಷದ ಯೂಲಿಯಾ ಗೆಲುವಿನ ಬಳಿಕ ಹೇಳಿದರು.
ವಿಂಬಲ್ಡನ್ನಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಆಟಗಾರರೊಬ್ಬರು ಮೂರನೇ ಸುತ್ತಿನಲ್ಲಿ ಸೋಲನುಭವಿಸಿರುವುದು ‘ಓಪನ್’ ಪಂದ್ಯಾವಳಿಗಳ ಯುಗದಲ್ಲಿ ಇದು ಕೇವಲ ನಾಲ್ಕನೇ ಬಾರಿಯಾಗಿದೆ.





