ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ | ಭಾರತದ 35 ಅತ್ಲೀಟ್ ಗಳು ಮೊದಲ ಬಾರಿ ಸ್ಪರ್ಧೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ.9: ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೆ.27ರಿಂದ ಅಕ್ಟೋಬರ್ 5ರ ತನಕ ನಡೆಯಲಿರುವ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ 35 ಕ್ರೀಡಾಪಟುಗಳು ಮೊದಲ ಬಾರಿ ಸ್ಪರ್ಧಿಸುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ.
ಮೊದಲ ಬಾರಿ ಸ್ಪರ್ಧಿಸುತ್ತಿರುವವರ ಪೈಕಿ ಈ ವರ್ಷಾರಂಭದಲ್ಲಿ ಸ್ವಿಟ್ಸರ್ ಲ್ಯಾಂಡ್ ನಲ್ಲಿ ಪುರುಷರ ಎಫ್42 ಜಾವೆಲಿನ್ ನಲ್ಲಿ 61.17 ಮೀ.ದೂರಕ್ಕೆ ಜಾವೆಲಿನ್ ಎಸೆದು ವಿಶ್ವ ದಾಖಲೆ ನಿರ್ಮಿಸಿದ್ದ ಮಹೇಂದ್ರ ಗುರ್ಜರ್ ಕೂಡ ಸೇರಿದ್ದಾರೆ.
ಸದ್ಯ ಪಟಿಯಾಲದಲ್ಲಿ ತರಬೇತಿ ನಿರತರಾಗಿರುವ ಗುರ್ಜರ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮೊದಲ ಬಾರಿ ಸ್ಪರ್ಧಿಸಲಿದ್ದಾರೆ.
ಮೊದಲ ಬಾರಿ ಸ್ಪರ್ಧಿಸುತ್ತಿರುವ ಅತ್ಲೀಟ್ ಗಳ ಪಟ್ಟಿಯಲ್ಲಿ ಅತುಲ್ ಕೌಶಿಕ್(ಡಿಸ್ಕಸ್ ಎಫ್ 57), ಪ್ರವೀಣ್(ಶಾಟ್ ಪುಟ್ ಎಫ್ 46), ಹ್ಯಾನಿ(ಡಿಸ್ಕಸ್ ಎಫ್ 37), ಮಿಟ್ ಪಟೇಲ್(ಲಾಂಗ್ ಜಂಪ್ ಟಿ 44), ಮಂಜೀತ್(ಜಾವೆಲಿನ್ ಎಫ್13), ವಿಶು(ಲಾಂಗ್ ಜಂಪ್ ಟಿ12), ಪುಷ್ಪೇಂದ್ರ ಸಿಂಗ್(ಜಾವೆಲಿನ್ ಎಫ್44), ಅಜಯ್ ಸಿಂಗ್(ಲಾಂಗ್ ಜಂಪ್ ಟಿ47), ಶುಭಮನ್ ಜುಯಲ್(ಶಾಟ್ ಪುಟ್ ಎಫ್ 57), ಬೀರಭದ್ರ ಸಿಂಗ್(ಡಿಸ್ಕಸ್ ಎಫ್57), ದಯವಂತಿ (ಮಹಿಳೆಯರ 400 ಮೀ. ಟಿ20), ಅಮಿಶಾ ರಾವತ್(ಮಹಿಳೆಯರ ಶಾಟ್ ಪುಟ್ ಎಫ್ 46), ಆನಂದಿ (ಕ್ಲಬ್ ಥ್ರೋ ಎಫ್ 32) ಹಾಗೂ ಸುಚಿತ್ರಾ ಪರಿದಾ(ಮಹಿಳೆಯರ ಜಾವೆಲಿನ್ ಎಫ್56).
ವಿಶ್ವ ಪ್ಯಾರಾ ಚಾಂಪಿಯನ್ ಶಿಪ್ ನಲ್ಲಿ 100ಕ್ಕೂ ಅಧಿಕ ದೇಶಗಳ 2,200ಕ್ಕೂ ಅಧಿಕ ಅತ್ಲೀಟ್ ಗಳು ಹಾಗೂ ಅಧಿಕಾರಿಗಳು 183 ಪದಕಗಳಿಗಾಗಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.







