ವರ್ಲ್ಡ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ | ಭಾರತಕ್ಕೆ ಮೊತ್ತ ಮೊದಲ ಪದಕ ಗೆದ್ದುಕೊಟ್ಟ ಸೋನಾಲ್ಬೆನ್ ಪಟೇಲ್

ಸೋನಾಲ್ಬೆನ್ ಪಟೇಲ್ | Photo Credit : X
ಪಟ್ಟಾಯ: ಥಾಯ್ಲೆಂಡ್ನ ಪಟ್ಟಾಯದಲ್ಲಿ ನಡೆದ 2026ರ ಆವೃತ್ತಿಯ ಐಟಿಟಿಎಫ್ ವರ್ಲ್ಡ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸೋನಾಲ್ಬೆನ್ ಪಟೇಲ್ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದರು. ಟಿಟಿ ಚಾಂಪಿಯನ್ಶಿಪ್ನಲ್ಲಿ ಭಾರತವು ಮೊತ್ತ ಮೊದಲ ಬಾರಿ ಪದಕ ಗೆದ್ದುಕೊಂಡಿದೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ಲಾಸ್-3 ಸೆಮಿ ಫೈನಲ್ನಲ್ಲಿ 39ರ ವಯಸ್ಸಿನ ಸೋನಾಲ್ಬೆನ್ ಇಟಲಿಯ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಕಾರ್ಲೊಟ್ಟಾ ರಗಝಿನಿ ವಿರುದ್ಧ 1-3(9-11, 11-6, 7-11, 5-11) ಅಂತರದಿಂದ ಸೋತಿದ್ದಾರೆ. ಕಂಚಿನ ಪದಕ ತನ್ನದಾಗಿಸಿಕೊಂಡರು.
ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಭಾರತದ ಟಿಟಿ ಆಟಗಾರ್ತಿ ಸೋನಾಲ್ಬೆನ್ ದಕ್ಷಿಣ ಕೊರಿಯಾದ, ಎರಡು ಬಾರಿಯ ಏಶ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತೆ ಲೀ ಮಿ ಜಿಯು ಅವರನ್ನು 3-2(12-10, 4-11, 9-11, 11-7, 11-4) ಅಂತರದಿಂದ ರೋಚಕವಾಗಿ ಮಣಿಸಿದ್ದರು.
ಕ್ವಾರ್ಟರ್ ಫೈನಲ್ನಲ್ಲಿ ಬ್ರೆಝಿಲ್ನ ಥಾಯಿಸ್ ಫ್ರಾಗಾ ಸೆವೆರೊರನ್ನು 3-0(11-9, 11-4, 11-5) ಅಂತರದಿಂದ ಮಣಿಸಿದರು. ಇದರೊಂದಿಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊತ್ತ ಮೊದಲ ಪದಕವನ್ನು ಖಾತ್ರಿಪಡಿಸಿದರು.
ಸೋನಾಲ್ಬೆನ್ ಪಟೇಲ್ ಅವರು ಐಚಿ-ನಗೋಯದಲ್ಲಿ ನಡೆದಿದ್ದ 2026ರ ಆವೃತ್ತಿಯ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲೂ ಕಂಚಿನ ಪದಕ ಜಯಿಸಿದ್ದರು. ಪ್ಯಾರಾ ಗೇಮ್ಸ್ನಲ್ಲಿ ಭಾರತವು ಪ್ಯಾರಾ ಟೇಬಲ್ ಟೆನಿಸ್ನಲ್ಲಿ ಏಳು ಕಂಚಿನ ಪದಕಗಳನ್ನು ಜಯಿಸಿತ್ತು.
ಮಹಿಳೆಯರ ಸಿಂಗಲ್ಸ್ ಕ್ಲಾಸ್4-5 ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಇನ್ನೋರ್ವ ಟಿಟಿ ಆಟಗಾರ್ತಿ ಭಾವಿನಾ ಪಟೇಲ್ ಚೀನಾದ ಬಿಯಾನ್ ಝಾಂಗ್ ವಿರುದ್ಧ 0-3(8-11, 7-11, 8-11) ಅಂತರದಿಂದ ಸೋತಿದ್ದಾರೆ.
ಮಿಕ್ಸೆಡ್ ಡಬಲ್ಸ್ ಕ್ಲಾಸ್ ಎಕ್ಸ್ಡಿ7ನಲ್ಲಿ ಶುಭಮನ್ ವಧ್ವಾ ಹಾಗೂ ಬೇಬಿ ಸಹನಾ ರವಿ ಅಂತಿಮ-16ರ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.






