ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ | ಒಲಿಂಪಿಕ್ಸ್ ಕೋಟಾ ಸ್ಥಾನ ಗೆದ್ದ ನೀರಜ್ ಕುಮಾರ್

ನೀರಜ್ ಕುಮಾರ್ | Photo Credit : PTI
ಹೊಸದಿಲ್ಲಿ, ನ. 11: ಖತರ್ನ ದೋಹಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದೆ. ನೀರಜ್ ಕುಮಾರ್ ಅವರು ಬುಧವಾರ ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕೋಟಾ ಸ್ಥಾನ ಗಿಟ್ಟಿಸಿದ್ದಾರೆ.
ನೀರಜ್ 591 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಎಂಟು ಶೂಟರ್ಗಳಿದ್ದ ಫೈನಲ್ ಸ್ಪರ್ಧೆಯಲ್ಲಿ 346.5 ಅಂಕ ಗಳಿಸಿದ ನೀರಜ್ ಮೂರನೇ ಸ್ಥಾನ ಪಡೆದರು. 2028ರ ಒಲಿಂಪಿಕ್ಸ್ನ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಎರಡನೇ ಕೋಟಾ ಸ್ಥಾನ ಪಡೆಯಲು ನೆರವಾದರು.
26ರ ವಯಸ್ಸಿನ ನೀರಜ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಇದೇ ಮೊದಲ ಬಾರಿ ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದರು. ಭಾರತದ ಭರವಸೆಯ ರೈಫಲ್ ಶೂಟರ್ ಆಗಿರುವ ನೀರಜ್ ಪಾಲಿಗೆ ಕಂಚಿನ ಪದಕ ಮಹತ್ವದ ಸಾಧನೆಯಾಗಿದೆ. ಈ ಹಿಂದೆ ಹಲವು ಬಾರಿ ಪ್ರಮುಖ ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಫೈನಲ್ಗೆ ತಲುಪಿದ್ದರೂ ವೈಯಕ್ತಿಕ ವಿಶ್ವ ಚಾಂಪಿಯನ್ಶಿಪ್ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ.
ತಟಸ್ಥ ಅತ್ಲೀಟ್ ಆಗಿ ಸ್ಪರ್ಧಿಸಿದ್ದ ಡಿಮಿಟ್ರಿ ಪಿಮೆನೊವ್ ವಿಶ್ವ ಜೂನಿಯರ್ ದಾಖಲೆಯ ಸ್ಕೋರ್ (362.5)ನೊಂದಿಗೆ ಚಿನ್ನದ ಪದಕ ಜಯಿಸಿದರು. ಸ್ಲೋವಾಕಿಯದ ಪತ್ರಿಕ್ ಜಾನಿ (357.2) ಬೆಳ್ಳಿ ಪದಕ ಗೆದ್ದಿದ್ದಾರೆ.
ನಾರ್ವೆಯ ಜಾನ್ ಹೆರ್ಮಾನ್ ಹೆಗ್ 335.9 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು. ಫೈನಲ್ಗೆ ತಲುಪಿದ್ದ ಭಾರತದ ಇನ್ನೋರ್ವ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ 323.7 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.
ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್ನ ವೈಯಕ್ತಿಕ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಗಳಲ್ಲಿ ಕೋಟಾ ಸ್ಥಾನಗಳ ಹಂಚಿಕೆ ಒಲಿಂಪಿಕ್ಸ್ ಅರ್ಹತಾ ನಿಯಮಗಳಿಗೆ ಒಳಪಟ್ಟಿರುತ್ತದೆ. ಅಗ್ರಸ್ಥಾನ ಪಡೆದ ಸ್ಪರ್ಧಿಗಳಿಗೆ ಕೋಟಾ ನೀಡುವಾಗ ಈಗಾಗಲೇ ಕೋಟಾ ಪಡೆದಿರುವ ದೇಶಗಳ ಅರ್ಹತೆಯನ್ನೂ ಪರಿಗಣಿಸಲಾಗುತ್ತದೆ.
ನೀರಜ್ ಅವರು ದೋಹಾ ಚಾಂಪಿಯನ್ಶಿಪ್ ಮೂಲಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಸ್ಥಾನ ಪಡೆದ ಭಾರತದ ಎರಡನೇ ಅತ್ಲೀಟ್ ಆಗಿದ್ದಾರೆ. ಗುರುವಾರ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಜಯಪಾಲ್ ಮಾಳವೀಯ ಒಲಿಂಪಿಕ್ಸ್ ಕೋಟಾ ಸ್ಥಾನ ಪಡೆದಿದ್ದರು.
ಇದಕ್ಕೂ ಮೊದಲು ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಪ್ರತಾಪ್ ಸಿಂಗ್ 586 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು. ಈ ಮೂಲಕ ಫೈನಲ್ನಲ್ಲಿ ನೀರಜ್ ಅವರನ್ನು ಸೇರಿಕೊಂಡರು. ಅಖಿಲ್ ಶೆಯೊರಾನ್ (575) 42ನೇ ಸ್ಥಾನ ಪಡೆದಿದ್ದರು.
ಮತ್ತೊಂದು ಪ್ರಮುಖ ಸಾಧನೆಯಲ್ಲಿ ಇಶಾ ಸಿಂಗ್, ಮನು ಭಾಕರ್ ಹಾಗೂ ದಿವ್ಯಾ ಸುಬ್ಬರಾಜು ದೋಹಾದಲ್ಲಿ ನಡೆಯುತ್ತಿರುವ ಚಾಂಪಿಯನ್ಶಿಪ್ನ ಮಹಿಳೆಯರ 25 ಮೀ. ಪಿಸ್ತೂಲ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಭಾರತೀಯ ತಂಡವು ಒಟ್ಟು 1,761 ಅಂಕ ಗಳಿಸಿ ಮೊದಲ ಸ್ಥಾನ ಪಡೆಯಿತು. ಕೊರಿಯಾ (1,748) ತಂಡ ಬೆಳ್ಳಿ ಜಯಿಸಿದರೆ, ವಿಯೆಟ್ನಾಂ (1,745) ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ಭಾರತೀಯ ತಂಡದ ನೇತೃತ್ವ ವಹಿಸಿದ್ದ ಇಶಾ 590 ಅಂಕ ಗಳಿಸಿದರೆ, ಮನು 587 ಹಾಗೂ ದಿವ್ಯಾ 584 ಅಂಕ ಗಳಿಸಿದ್ದಾರೆ. ಇಶಾ ಹಾಗೂ ಮನು ಇಬ್ಬರೂ ವೈಯಕ್ತಿಕ ವಿಭಾಗದಲ್ಲಿ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಮನು ಸ್ವಲ್ಪದರಲ್ಲೇ ಪದಕ ವಂಚಿತರಾದರೆ, ಇಶಾ ಎಂಟನೇ ಸ್ಥಾನ ಪಡೆದರು.
ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ ಟೀಮ್ ಸ್ಪರ್ಧೆಯಲ್ಲೂ ಭಾರತ ಮತ್ತೊಂದು ಪದಕ ಜಯಿಸಿದೆ. ಪ್ರತಾಪ್ ಸಿಂಗ್ ತೋಮರ್, ಅಖಿಲ್ ಶೆಯೊರಾನ್ ಹಾಗೂ ನೀರಜ್ ಕುಮಾರ್ ಒಟ್ಟು 1,751 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು. ಪ್ರತಾಪ್ ಸಿಂಗ್ (587) ಭಾರತದ ಪರ ಗರಿಷ್ಠ ಅಂಕ ಗಳಿಸಿದರೆ, ನೀರಜ್ (582) ಹಾಗೂ ಅಖಿಲ್ (582) ನಂತರದ ಸ್ಥಾನದಲ್ಲಿದ್ದರು.
ಝೆಕಿಯಾ 1,754 ಅಂಕ ಗಳಿಸಿ ಚಿನ್ನದ ಪದಕ ಜಯಿಸಿತು. ನಾರ್ವೆ (1,752) ಎರಡನೇ ಸ್ಥಾನ ಪಡೆಯಿತು. 20 ತಂಡಗಳಿದ್ದ ಸ್ಪರ್ಧೆಯಲ್ಲಿ ಭಾರತವು ನಾರ್ವೆಗಿಂತ ಒಂದು ಅಂಕ ಹಾಗೂ ಝೆಕಿಯಾಗಿಂತ ಮೂರು ಅಂಕ ಕಡಿಮೆ ಗಳಿಸಿತು.
ಭಾರತವು ಗುರುವಾರ ನಡೆಯಲಿರುವ ಪುರುಷರ ಹಾಗೂ ಮಹಿಳೆಯರ ಟ್ರ್ಯಾಪ್ ಸ್ಪರ್ಧೆಗಳಲ್ಲಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕೋಟಾಗಳನ್ನು ಪಡೆಯುವ ಅವಕಾಶ ಹೊಂದಿದೆ. ಎರಡೂ ಸ್ಪರ್ಧೆಗಳು ತಲಾ ಮೂರು ಕೋಟಾ ಸ್ಥಾನಗಳನ್ನು ನೀಡಲಿವೆ. ಇದು ಒಲಿಂಪಿಕ್ಸ್ ಅರ್ಹತಾ ನಿಯಮಗಳಿಗೆ ಒಳಪಟ್ಟಿರುತ್ತದೆ.
ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಒಟ್ಟಾರೆ ಪ್ರದರ್ಶನ ಅತ್ಯುತ್ತಮವಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಹಲವು ಶೂಟರ್ಗಳು ಪದಕ ಗೆದ್ದಿದ್ದಾರೆ. ನಿವೇದಿತಾ ನಾಯರ್ ಮಹಿಳೆಯರ 25 ಮೀ. ಸ್ಟ್ಯಾಂಡರ್ಡ್ ಪಿಸ್ತೂಲ್ನಲ್ಲಿ ಕಂಚಿನ ಪದಕ ಜಯಿಸಿದ್ದರೆ, ಜಯಪಾಲ್ ಮಾಳವೀಯ ಪುರುಷರ 10 ಮೀ. ಏರ್ ಪಿಸ್ತೂಲ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಪುರುಷರ 50 ಮೀ. ಪಿಸ್ತೂಲ್ ಟೀಮ್ ಸ್ಪರ್ಧೆಯಲ್ಲಿ ರವೀಂದರ್ ಸಿಂಗ್, ಸೌರಭ್ ಚೌಧರಿ ಹಾಗೂ ಅಮನ್ಪ್ರೀತ್ ಸಿಂಗ್ ಚಿನ್ನದ ಪದಕ ಜಯಿಸಿದ್ದಾರೆ. ಇದೇ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ರವೀಂದರ್ ಬೆಳ್ಳಿ ಪದಕ ಜಯಿಸಿದ್ದರು.
ಮಹಿಳೆಯರ 10 ಮೀ. ಏರ್ ರೈಫಲ್ ಟೀಮ್ ಸ್ಪರ್ಧೆಯಲ್ಲಿ ಇಳವೆನಿಲ್ ವಲರಿವಾನ್, ಸೋನಂ ಮಾಸ್ಕರ್ ಹಾಗೂ ಶಾಂಭವಿ ಕ್ಷೀರ್ಸಾಗರ್ ಅವರು ಭಾರತ ತಂಡ ಬೆಳ್ಳಿ ಪದಕ ಗೆಲ್ಲಲು ನೆರವಾದರು.






