ಬೆಂಗಳೂರಿನಲ್ಲಿ ಡಿ. 17ರಿಂದ ವರ್ಲ್ಡ್ ಟೆನಿಸ್ ಲೀಗ್
ನಾಲ್ಕು ದಿನಗಳ ಕಾಲ ರೋಚಕ ಪಂದ್ಯಗಳು

ಬೆಂಗಳೂರು: ವಿಶ್ವದ ಖ್ಯಾತ ಟೆನಿಸ್ ತಾರೆಗಳು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುವ ಪ್ರತಿಷ್ಠಿತ ವರ್ಲ್ಡ್ ಟೆನಿಸ್ ಲೀಗ್ನ (WTL) ಐದನೇ ಆವೃತ್ತಿಗೆ ಬೆಂಗಳೂರು ಸಜ್ಜಾಗಿದೆ. ಡಿ. 17ರಿಂದ 20ರವರೆಗೆ ನಗರದ KSLTA ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಾಲ್ಕು ದಿನಗಳ ಕಾಲ ಟೂರ್ನಿ ನಡೆಯಲಿದೆ.
ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಟೆನಿಸ್ ತಾರೆಗಳ ಜೊತೆಗೆ ಭಾರತದ ಪ್ರಮುಖ ಆಟಗಾರರು ಹಾಗೂ ಯುವ ಪ್ರತಿಭೆಗಳು ಭಾಗವಹಿಸಲಿದ್ದಾರೆ.
ಕಳೆದ ನಾಲ್ಕು ಆವೃತ್ತಿಗಳ ಯಶಸ್ಸಿನ ಬಳಿಕ ಐದನೇ ಆವೃತ್ತಿಯ ಬಗ್ಗೆಯೂ ಟೆನಿಸ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಹಿಂದಿನ ಆವೃತ್ತಿಯಲ್ಲಿ ಭಾಗವಹಿಸಿದ್ದ ಪೌಲಾ ಬಡೋಸಾ, ಯೂಕಿ ಭಾಂಬ್ರಿ, ಸುಮಿತ್ ನಗಾಲ್, ದಕ್ಷಿಣೇಶ್ವರ್ ಸುರೇಶ್, ಮಾಯಾ ರಾಜೇಶ್ವರನ್ ರೇವತಿ ಹಾಗೂ ಶ್ರೀವಲ್ಲಿ ಭಾಮಿದಿಪಾಟಿ ಸೇರಿದಂತೆ ಹಲವು ಆಟಗಾರರು ಈ ಬಾರಿಯೂ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಈ ಆವೃತ್ತಿಯಲ್ಲೂ ಗುಣಮಟ್ಟದ ಟೆನಿಸ್ ನಿರೀಕ್ಷೆ: ಭೂಪತಿ
ವರ್ಲ್ಡ್ ಟೆನಿಸ್ ಲೀಗ್ ನ ಸಹ-ಸಂಸ್ಥಾಪಕ ಮಹೇಶ್ ಭೂಪತಿ ಮಾತನಾಡಿ, ಕಳೆದ ಆವೃತ್ತಿಯಲ್ಲಿ ಅಂತರರಾಷ್ಟ್ರೀಯ ಆಟಗಾರರು ಮತ್ತು ಭಾರತದ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಆಡಿದ್ದು, ಅಭಿಮಾನಿಗಳಿಗೆ ಉತ್ತಮ ಗುಣಮಟ್ಟದ ಟೆನಿಸ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಿತ್ತು ಎಂದರು.
ಅಭಿಮಾನಿಗಳಿಂದ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆ ಹಾಗೂ ಟೂರ್ನಿಯ ಸುತ್ತಲಿನ ಉತ್ಸಾಹ ಮುಂದಿನ ಆವೃತ್ತಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿದೆ. ಐದನೇ ಆವೃತ್ತಿಯಲ್ಲಿ ಇನ್ನಷ್ಟು ಹೊಸ ಅಭಿಮಾನಿಗಳನ್ನು ತಲುಪುವುದರ ಜೊತೆಗೆ, ಪ್ರತಿ ಆವೃತ್ತಿಯನ್ನೂ ಮತ್ತಷ್ಟು ಉತ್ತಮಗೊಳಿಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಆಯೋಜನೆಗೆ ಸಂತಸ: ಹೇಮಾಲಿ ಶರ್ಮಾ
ಟೂರ್ನಿಯ ಸಹ-ಸಂಸ್ಥಾಪಕಿ ಹೇಮಾಲಿ ಶರ್ಮಾ ಮಾತನಾಡಿ, ವರ್ಲ್ಡ್ ಟೆನಿಸ್ ಲೀಗ್ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತಿರುವುದು ಸಂತಸದ ವಿಚಾರ ಎಂದರು.
ಬೆಂಗಳೂರಿನಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹವಿದ್ದು, ಟೆನಿಸ್ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಐದನೇ ಆವೃತ್ತಿಯ ಆಯೋಜನೆಗೆ ಬೆಂಗಳೂರು ಸೂಕ್ತ ತಾಣವಾಗಿದೆ. ವಿಶ್ವದ ಅತ್ಯುತ್ತಮ ಆಟಗಾರರ ಜೊತೆಗೆ ಭಾರತದ ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳು ಭಾಗವಹಿಸುವುದರಿಂದ ಅಭಿಮಾನಿಗಳಿಗೆ ಮರೆಯಲಾಗದ ಟೆನಿಸ್ ಅನುಭವ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದಾದ್ಯಂತ ಟೆನಿಸ್ ಕ್ರೀಡೆಯ ಜನಪ್ರಿಯತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತೀಯ ಅಭಿಮಾನಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಹತ್ತಿರದಿಂದ ವೀಕ್ಷಿಸಲು ವರ್ಲ್ಡ್ ಟೆನಿಸ್ ಲೀಗ್ ಅವಕಾಶ ಕಲ್ಪಿಸುತ್ತಿದೆ. ಇದರ ಜೊತೆಗೆ, ಭಾರತದ ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಈ ಟೂರ್ನಿ ಉತ್ತಮ ಅವಕಾಶ ಒದಗಿಸುತ್ತಿದೆ.
ಐದನೇ ಆವೃತ್ತಿಯಲ್ಲಿ ಭಾಗವಹಿಸುವ ಆಟಗಾರರ ಸಂಪೂರ್ಣ ಪಟ್ಟಿ ಹಾಗೂ ತಂಡಗಳ ವಿವರಗಳನ್ನು ಆಯೋಜಕರು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದಾರೆ.






