ಆಸ್ಟ್ರೇಲಿಯ ಮಡಿಲಿಗೆ ಆ್ಯಶಸ್ ಕಪ್| ಇಂಗ್ಲೆಂಡ್ ವಿರುದ್ಧ ಸರಣಿ 4-1 ಅಂತರದಿಂದ ಕೈವಶ

PC: PTI
ಸಿಡ್ನಿ, ಜ.8: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಐದು ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಸರಣಿಯನ್ನು 4-1 ಅಂತರದಿಂದ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಪ್ರತಿಷ್ಠಿತ ಆ್ಯಶಸ್ ಕಪ್ ಅನ್ನು ತನ್ನಲ್ಲೆ ಉಳಿಸಿಕೊಂಡಿದೆ.
ಇದರೊಂದಿಗೆ ಆತಿಥೇಯರು ವಿದಾಯದ ಪಂದ್ಯವನ್ನಾಡಿದ ಹಿರಿಯ ಕ್ರಿಕೆಟಿಗ ಉಸ್ಮಾನ್ ಖ್ವಾಜಾಗೆ ಗೆಲುವಿನ ಉಡುಗೊರೆ ನೀಡಿದ್ದಾರೆ.
ಐದನೇ ಹಾಗೂ ಕೊನೆಯ ದಿನದಾಟವಾದ ಗುರುವಾರ ಪಂದ್ಯ ಗೆಲ್ಲಲು 160 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ತಂಡ ಐದು ವಿಕೆಟ್ಗಳನ್ನು ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದರೂ ಭೋಜನ ವಿರಾಮದ ನಂತರ ಗೆಲುವಿನ ದಡ ಸೇರಿತು. ಕ್ಯಾಮರೂನ್ ಗ್ರೀನ್ ಔಟಾಗದೆ 22 ಹಾಗೂ ಅಲೆಕ್ಸ್ ಕ್ಯಾರಿ ಔಟಾಗದೆ 16 ರನ್ ಗಳಿಸಿದರು.
ಆಸ್ಟ್ರೇಲಿಯ ತಂಡವು ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್(29 ರನ್)ಹಾಗೂ ಜಾಕ್ ವೆದರಾಲ್ಡ್(34 ರನ್)ಅವರೊಂದಿಗೆ ನಾಯಕ ಸ್ಟೀವನ್ ಸ್ಮಿತ್(12 ರನ್)ಹಾಗೂ ಖ್ವಾಜಾ(6 ರನ್)ಅವರ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. ಒಟ್ಟು 88 ಟೆಸ್ಟ್ ಪಂದ್ಯಗಳನ್ನು ಆಡಿರುವ ಖ್ವಾಜಾ ತನ್ನ ಕೊನೆಯ ಇನಿಂಗ್ಸ್ನಲ್ಲಿ ಕೇವಲ ಆರು ರನ್ ಗಳಿಸಿದರು.
20ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಮಾರ್ನಸ್ ಲ್ಯಾಬುಶೇನ್ 37ರನ್ ಗಳಿಸಿದ್ದಾಗ ರನೌಟಾದರು. ಆಗ ಆಸ್ಟ್ರೇಲಿಯ ತಂಡವು 121 ರನ್ಗೆ ಐದನೇ ವಿಕೆಟ್ ಕಳೆದುಕೊಂಡಿತು.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡವು ತನ್ನ ಎರಡನೇ ಇನಿಂಗ್ಸ್ನಲ್ಲಿ ಜೇಕಬ್ ಬೆಥೆಲ್ ಏಕಾಂಗಿ ಹೋರಾಟದ(154 ರನ್, 265 ಎಸೆತ, 15 ಬೌಂಡರಿ)ಹೊರತಾಗಿಯೂ 342 ರನ್ಗೆ ಸರ್ವಪತನಗೊಂಡಾಗ ಆಸ್ಟ್ರೇಲಿಯ ಗೆಲುವು ಸಾಧಿಸುವುದರಲ್ಲಿ ಸಂಶಯವೇ ಇರಲಿಲ್ಲ.
ಪ್ರವಾಸಿ ಇಂಗ್ಲೆಂಡ್ ತಂಡವು ಪರ್ತ್ ಹಾಗೂ ಬ್ರಿಸ್ಬೇನ್ನಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 8 ವಿಕೆಟ್ಗಳಿಂದ ಸೋಲನುಭವಿಸಿ, ಅಡಿಲೇಡ್ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯವನ್ನು 82 ರನ್ನಿಂದ ಸೋತಾಗಲೇ ಸರಣಿ ಕೈಚೆಲ್ಲಿತ್ತು.
ಮೆಲ್ಬರ್ನ್ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳ ಅಂತರದಿಂದ ಗೆದ್ದಿದ್ದ ಇಂಗ್ಲೆಂಡ್ ಮರು ಹೋರಾಟ ನೀಡಿತ್ತು. 2010-11ರ ನಂತರ 15 ವರ್ಷಗಳಲ್ಲಿ ಮೊದಲ ಬಾರಿ ಆಸ್ಟ್ರೇಲಿಯದ ಮಣ್ಣಿನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿ ಇತಿಹಾಸ ನಿರ್ಮಿಸಿತ್ತು.
ಆ್ಯಶಸ್ ಸರಣಿಗಾಗಿನ ಸಿದ್ಧತೆ ಕೊರತೆ, ಅಶಿಸ್ತು ಹಾಗೂ ಬೇಝ್ಬಾಲ್ ಶೈಲಿಯ ಕ್ರಿಕೆಟ್ನಿಂದಾಗ ತೀವ್ರ ಟೀಕೆಗೆ ಗುರಿಯಾಗಿದ್ದ ಇಂಗ್ಲೆಂಡ್ ತಂಡವು ಮೆಲ್ಬರ್ನ್ನಲ್ಲಿ ಗೆಲುವು ದಾಖಲಿಸಿ ಸಮಾಧಾನಪಟ್ಟುಕೊಂಡಿತ್ತು.
ಆಸ್ಟ್ರೇಲಿಯ ನೆಲದಲ್ಲಿ ಆಡಿರುವ 18 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಮೊದಲ ಗೆಲುವು ದಾಖಲಿಸಿತ್ತು. ಸಿಡ್ನಿಯಲ್ಲಿ ಕೊನೆಯ ದಿನದ ತನಕ ಹೋರಾಟ ನೀಡಿದರೂ ಗೆಲುವು ದಕ್ಕಲಿಲ್ಲ.
ಸರಣಿಯಲ್ಲಿ ವೇಗದ ಬೌಲರ್ ಜೋಶ್ ಹೇಝಲ್ವುಡ್ ಹಾಗೂ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯ ಹೊರತಾಗಿಯೂ ಆಸ್ಟ್ರೇಲಿಯ ತಂಡವು ಆ್ಯಶಸ್ ಕಪ್ ಎತ್ತಿ ಹಿಡಿಯುವಲ್ಲಿ ಯಶಸ್ಸು ಕಂಡಿದೆ. ಹಿರಿಯ ಸ್ಪಿನ್ನರ್ ನಾಥನ್ ಲಿಯೊನ್ ಕೂಡ ಸೀಮಿತ ಕೊಡುಗೆ ನೀಡಿದ್ದರು.
ಸುಮಾರು 8,60,000 ಕ್ರಿಕೆಟ್ ಅಭಿಮಾನಿಗಳು ಆ್ಯಶಸ್ ಸರಣಿಯನ್ನು ವೀಕ್ಷಿಸಿದ್ದರು. ಸಿಡ್ನಿ ಪಂದ್ಯವೊಂದರಲ್ಲೇ 2,11,302 ಜನರು ಆಗಮಿಸಿದ್ದರು.
ಮಾತಿನ ಚಕಮಕಿ: ರನ್ ಚೇಸ್ ಆರಂಭದಲ್ಲೇ ಬ್ರೆಂಡನ್ ಕಾರ್ಸ್ ಎಸೆತವನ್ನು ಎರಡು ಬಾರಿ ಬೌಂಡರಿ ಗೆರೆ ದಾಟಿಸಿದ ಹೆಡ್ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದರು. ವೆದರಾಲ್ಡ್ ಅವರು ಜೋಶ್ ಟೊಂಗ್ ವಿರುದ್ಧ ಬೌಂಡರಿ ಗಳಿಸಿದರು.
ವೆದರಾಲ್ಡ್ 16ರನ್ ಗಳಿಸಿದ್ದಾಗ ಡಿಆರ್ಎಸ್ನಿಂದ ಔಟಾಗುವುದರಿಂದ ಬಚಾವಾದರು. ಆಗ ಕೋಪಗೊಂಡ ಕಾರ್ಸ್ ಅವರು ಆನ್ಫೀಲ್ಡ್ ಅಂಪೈರ್ಗೆ ದೂರು ನೀಡಿದರು. ಈ ವೇಳೆ ಸ್ಟೋಕ್ಸ್ ಹಾಗೂ ಕಾರ್ಸ್ ಅವರು ವೆದರಾಲ್ಡ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಇಂಗ್ಲೆಂಡ್ ಕೊನೆಗೂ ಹೆಡ್ ವಿಕೆಟನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಹೆಡ್ ಅವರು ಟೊಂಗ್ ಎಸೆತವನ್ನು ಕೆಣಕಲು ಹೋಗಿ ಕಾರ್ಸ್ಗೆ ಕ್ಯಾಚ್ನೀಡಿದರು. ವೆದರಾಲ್ಡ್ ಅವರು ಟೊಂಗ್ ಬೌಲಿಂಗ್ನಲ್ಲಿ ಮ್ಯಾಥ್ಯೂ ಪಾಟ್ಸ್ಗೆ ವಿಕೆಟ್ ಒಪ್ಪಿಸಿದರು.
ನಾಯಕ ಸ್ಮಿತ್ ಅವರು ವಿಲ್ ಜಾಕ್ಸ್ ಅವರ ಸ್ಪಿನ್ ಮೋಡಿಗೆ ಮರುಳಾಗಿ ಕ್ಲೀನ್ಬೌಲ್ಡಾದರು. ಖ್ವಾಜಾ ಅವರು ಟೊಂಗ್ಗೆ ಕ್ಲೀನ್ಬೌಲ್ಡ್ ಆಗಿ ಪೆವಿಲಿಯನ್ಗೆ ವಾಪಸಾಗುತ್ತಿದ್ದಾಗ ಇಂಗ್ಲೆಂಡ್ ಆಟಗಾರರು ಗೌರವ ರಕ್ಷೆ ನೀಡಿದರು.
ಇಂಗ್ಲೆಂಡ್ 342 ರನ್ಗೆ ಆಲೌಟ್: ಇದಕ್ಕೂ ಮೊದಲು 8 ವಿಕೆಟ್ಗಳ ನಷ್ಟಕ್ಕೆ 302 ರನ್ ಗಳಿಸಿ 119 ರನ್ ಮುನ್ನಡೆ ಪಡೆದಿದ್ದ ಇಂಗ್ಲೆಂಡ್ ತಂಡವು ನಿನ್ನೆಯ ಮೊತ್ತಕ್ಕೆ ಕೇವಲ 40 ರನ್ ಸೇರಿಸಿ ಆಲೌಟಾಯಿತು.
ಮೂರನೇ ಕ್ರಮಾಂಕದ ಬ್ಯಾಟರ್ ಬೆಥೆಲ್ 142 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದರು. ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಎರಡು ರನ್ ಗಳಿಸಿದ ಬೆಥೆಲ್ 150 ರನ್ ಪೂರೈಸಿದರು. ಸ್ಟಾರ್ಕ್ ಬೌಲಿಂಗ್ನಲ್ಲಿ ವಿಕೆಟ್ಕೀಪರ್ ಕ್ಯಾರಿಗೆ ವಿಕೆಟ್ ಒಪ್ಪಿಸಿದ ಬೆಥೆಲ್ ಅವರ 265 ಎಸೆತಗಳ ಮ್ಯಾರಥಾನ್ ಇನಿಂಗ್ಸ್ನಲ್ಲಿ 15 ಬೌಂಡರಿಗಳಿದ್ದವು.
ಟೊಂಗ್(6 ರನ್)ವಿಕೆಟನ್ನು ಪಡೆದ ಸ್ಟಾರ್ಕ್ ಇಂಗ್ಲೆಂಡ್ ತಂಡದ ಎರಡನೇ ಇನಿಂಗ್ಸ್ಗೆ ತೆರೆ ಎಳೆದರು. ಪಾಟ್ಸ್ ಔಟಾಗದೆ 18 ರನ್ ಗಳಿಸಿದರು. ಸ್ಟಾರ್ಕ್ ಅವರು ಸರಣಿಯಲ್ಲಿ 31ನೇ ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. 156 ರನ್ ಗಳಿಸಿದ್ದಲ್ಲದೆ, 31 ವಿಕೆಟ್ಗಳನ್ನು ಉರುಳಿಸಿರುವ ಸ್ಟಾರ್ಕ್ ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಐದನೇ ಪಂದ್ಯದಲ್ಲಿ 163 ಹಾಗೂ 29 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.
ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಜೋ ರೂಟ್ ಶತಕದ ಬಲದಿಂದ 384 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ತಂಡವು ಹೆಡ್ ಹಾಗೂ ಸ್ಮಿತ್ ಶತಕಗಳ ಸಹಾಯದಿಂದ ಮೊದಲ ಇನಿಂಗ್ಸ್ನಲ್ಲಿ 567 ರನ್ ಕಲೆ ಹಾಕಿತ್ತು.







