ಲಾರ್ಡ್ಸ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ : ಸತತ ಎರಡನೇ ಪ್ರಶಸ್ತಿ ಗೆಲ್ಲುವತ್ತ ಆಸ್ಟ್ರೇಲಿಯದ ಚಿತ್ತ

PC : ddnews.gov.in
ಲಂಡನ್: ಬಹು ನಿರೀಕ್ಷಿತ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ)ಫೈನಲ್ ಪಂದ್ಯ ಬುಧವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಪ್ಯಾಟ್ ಕಮಿನ್ಸ್ ಬಳಗವು ಎರಡು ವರ್ಷಗಳ ಹಿಂದೆ ಗೆದ್ದಿರುವ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.
ದಿ ಓವಲ್ನಲ್ಲಿ ನಡೆದಿದ್ದ 2023ರ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 209ರನ್ಗಳಿಂದ ಮಣಿಸಿದ್ದ ಆಸ್ಟ್ರೇಲಿಯ ಪ್ರಶಸ್ತಿಯನ್ನು ಜಯಿಸಿತ್ತು.
‘ಕ್ರಿಕೆಟ್ನ ತವರು’ ಲಾರ್ಡ್ಸ್ ಕ್ರೀಡಾಂಗಣ ಇದೇ ಮೊದಲ ಬಾರಿ ಡಬ್ಲ್ಯುಟಿಸಿ ಫೈನಲ್ನ ಆತಿಥ್ಯ ವಹಿಸಲು ಸಜ್ಜಾಗಿದೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯ ತಂಡ ಫೈನಲ್ ಹಾದಿಯಲ್ಲಿ ಸ್ಥಿರತೆ, ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಆಸ್ಟ್ರೇಲಿಯವು 19 ಪಂದ್ಯಗಳಲ್ಲಿ 13ರಲ್ಲಿ ಜಯ, 4ರಲ್ಲಿ ಸೋಲು ಹಾಗೂ 2ರಲ್ಲಿ ಡ್ರಾ ಸಾಧಿಸಿದೆ. ಒಟ್ಟು 154 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು.
‘‘ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸತತ 2ನೇ ಬಾರಿ ಟ್ರೋಫಿ ಜಯಿಸಿ ಪ್ರಸಕ್ತ ತಂಡವನ್ನು ಸಾರ್ವಕಾಲಿಕ ಶ್ರೇಷ್ಠ ಆಸ್ಟ್ರೇಲಿಯ ತಂಡಗಳಲ್ಲಿ ಒಂದನ್ನಾಗಿಸುವ ನಿಟ್ಟಿಯಲ್ಲಿ ಪ್ರಯತ್ನಿಸಲಿದ್ದೇವೆ’’ ಎಂದು ಸ್ಟಾರ್ ಆಫ್ ಸ್ಪಿನ್ನರ್ ನಾಥನ್ ಲಿಯೊನ್ ಹೇಳಿದ್ದಾರೆ.
37ರ ಹರೆಯದ ಲಿಯೊನ್ ದಕ್ಷಿಣ ಆಫ್ರಿಕಾ ವಿರುದ್ಧ ಆಡಿರುವ 18 ಪಂದ್ಯಗಳಲ್ಲಿ 56 ವಿಕೆಟ್ಗಳನ್ನು ಪಡೆದಿದ್ದಾರೆ. 2011ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿರುವ ಲಿಯೊನ್ 136 ಪಂದ್ಯಗಳಲ್ಲಿ ಒಟ್ಟು 553 ವಿಕೆಟ್ಗಳನ್ನು ಪಡೆದಿದ್ದಾರೆ.
ಲ್ಯಾಬುಶೇನ್ ಅವರು ಉಸ್ಮಾನ್ ಖ್ವಾಜಾರೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಜೋಶ್ ಹೇಝಲ್ವುಡ್ ಆಡುವ 11ರ ಬಳಗದಲ್ಲಿದ್ದು, ಮಿಚೆಲ್ ಸ್ಟಾರ್ಕ್ ಹಾಗೂ ನಾಯಕ ಕಮಿನ್ಸ್ರೊಂದಿಗೆ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಬೆನ್ನಿನ ಸರ್ಜರಿಯಿಂದ ಚೇತರಿಸಿಕೊಂಡ ನಂತರ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ.
ಆ್ಯಶಸ್ ಸರಣಿಯಲ್ಲಿ ಎರಡು ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯ ಡಬ್ಲ್ಯುಟಿಸಿಯಲ್ಲಿ ತನ್ನ ಅಭಿಯಾನ ಆರಂಭಿಸಿತ್ತು. ಆ ನಂತರ ಸ್ವದೇಶದಲ್ಲಿ ಪಾಕಿಸ್ತಾನದ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿತ್ತು. ವೆಸ್ಟ್ಇಂಡೀಸ್ನ ಶಮರ್ ಜೋಸೆಫ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಸ್ವದೇಶದಲ್ಲಿ ಆಸ್ಟ್ರೇಲಿಯದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ್ದರು.
ನ್ಯೂಝಿಲ್ಯಾಂಡ್ ವಿರುದ್ಧ 2-0 ಅಂತರದಿಂದ ಕ್ಲೀನ್ಸ್ವೀಪ್ ಸಾಧಿಸಿದ್ದ ಆಸ್ಟ್ರೇಲಿಯ ತಂಡವು ಭಾರತ ತಂಡದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿತ್ತು.
ಭಾರತ ತಂಡದ ವಿರುದ್ಧ ಮೊದಲ ಪಂದ್ಯವನ್ನು ಸೋತಿದ್ದ ಆಸ್ಟ್ರೇಲಿಯ ತಂಡವು ಆನಂತರ ಮುಂದಿನ 4 ಪಂದ್ಯಗಳನ್ನು ಗೆದ್ದುಕೊಂಡು ಸರಣಿಯನ್ನು ಗೆದ್ದಿರುವುದಿಲ್ಲದೆ, ಡಬ್ಲ್ಯುಟಿಸಿ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿತು.
ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯ ತಂಡವು ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್ ಹಾಗೂ ನಥಾನ್ ಲಿಯೊನ್ ಅವರ ಅನುಭವವನ್ನು ಹೆಚ್ಚು ನೆಚ್ಚಿಕೊಂಡಿದೆ. ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಟ್ರಾವಿಸ್ ಹೆಡ್ ಹಾಗೂ ಕ್ಯಾಮರೂನ್ ಗ್ರೀನ್ ತಂಡಕ್ಕೆ ಹೊಸ ಆಯಾಮ ನೀಡಲಿದ್ದಾರೆ.
ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು 25 ವರ್ಷಗಳಿಂದ ಕಾಡುತ್ತಿರುವ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಹಾಗೂ ಮೊದಲ ಬಾರಿ ಡಬ್ಲ್ಯುಟಿಸಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ದಕ್ಷಿಣ ಆಫ್ರಿಕಾ ತಂಡವು 1998ರಲ್ಲಿ ಐಸಿಸಿ ನಾಕೌಟ್ ಪ್ರಶಸ್ತಿಯನ್ನು ಜಯಿಸಿತ್ತು.
ಹರಿಣ ಪಡೆ 12 ಪಂದ್ಯಗಳಲ್ಲಿ 8ರಲ್ಲಿ ಜಯ, 1 ಡ್ರಾ ಹಾಗೂ ಕೇವಲ 3ರಲ್ಲಿ ಸೋಲುವ ಮೂಲಕ ಡಬ್ಲ್ಯುಟಿಸಿ 2023-25ರ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ದಿಟ್ಟ ಪ್ರದರ್ಶನ, ಪರಿಸ್ಥಿತಿಗೆ ಹೊಂದಿಕೊಳ್ಳುವುದು ಹಾಗೂ ಸ್ವದೇಶದ ಮೈದಾನದಲ್ಲಿ ಪ್ರಾಬಲ್ಯ ಸಾಧಿಸಿ ಇದೇ ಮೊದಲ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿದೆ.
ಸ್ವದೇಶದಲ್ಲಿ ಭಾರತ ವಿರುದ್ಧ 1-1ರಿಂದ ಡ್ರಾ ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ತನ್ನ ಅಭಿಯಾನ ಆರಂಭಿಸಿತ್ತು. ವಿದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 0-2ರಿಂದ ಸೋಲನುಭವಿಸಿ ಹಿನ್ನಡೆ ಕಂಡಿತು. ಆದರೆ ತಕ್ಷಣವೇ ಪುಟಿದೆದ್ದ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ಇಂಡೀಸ್ನಲ್ಲಿ 1-0 ಅಂತರದಿಂದ ಜಯ ಸಾಧಿಸಿತು.
ಬವುಮಾ ಬಳಗವು ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಸತತವಾಗಿ 2-0 ಅಂತರದಿಂದ ಸರಣಿ ಜಯಿಸಿತು. ವೇಗದ ಬೌಲರ್ಗಳಾದ ಕಾಗಿಸೊ ರಬಾಡ ಹಾಗೂ ಲುಂಗಿ ಗಿಡಿ ಹಾಗೂ ಸ್ಪಿನ್ನರ್ ಕೇಶವ ಮಹಾರಾಜ್ ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದರು.
ಸೆಂಚೂರಿಯನ್ನಲ್ಲಿ ಪಾಕಿಸ್ತಾನದ ವಿರುದ್ದ 2 ವಿಕೆಟ್ನಿಂದ ರೋಚಕ ಜಯಸಾಧಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಡಬ್ಲ್ಯುಟಿಸಿಯಲ್ಲಿ ಸತತ 7ನೇ ಟೆಸ್ಟ್ ಪಂದ್ಯವನ್ನು ಜಯಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಫೈನಲ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿತು.
ದಕ್ಷಿಣ ಆಫ್ರಿಕಾ ತಂಡವು ಯುವಕರ ಹಾಗೂ ಹಿರಿಯ ಆಟಗಾರರ ಸಮ್ಮಿಶ್ರಣವಾಗಿದೆ. ಮರ್ಕ್ರಮ್, ಮಾರ್ಕೊ ಜಾನ್ಸನ್ ಹಾಗೂ ಡೇವಿಡ್ ಬೆಡಿಂಗ್ಹ್ಯಾಮ್ ಭರ್ಜರಿ ಫಾರ್ಮ್ನಲ್ಲಿದ್ದರೆ, ಹಿರಿಯ ಆಟಗಾರ ರಬಾಡ ಆಸ್ಟ್ರೇಲಿಯ ತಂಡದ ಸವಾಲನ್ನು ನಿಭಾಯಿಸಬಲ್ಲರು.
ಎಡಗೈಆರಂಭಿಕ ರಯಾನ್ ರಿಕೆಲ್ಟನ್ 2023-25ರ ಡಬ್ಲ್ಯುಟಿಸಿ ಸರಣಿಯಲ್ಲಿ ತನ್ನ ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದ್ದರು. ಆಲ್ರೌಂಡರ್ ಮುಲ್ದರ್ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಕೇಶವ ಮಹಾರಾಜ್ ತಂಡದಲ್ಲಿರುವ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಕಾಗಿಸೊ ರಬಾಡ, ಮಾರ್ಕೊ ಜಾನ್ಸನ್ ಹಾಗೂ ಲುಂಗಿ ಗಿಡಿ ವೇಗದ ಬೌಲಿಂಗ್ ವಿಭಾಗದಲ್ಲಿದ್ದಾರೆ.