ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ | ಜೋ ರೂಟ್ ಐತಿಹಾಸಿಕ ಸಾಧನೆ

ಜೋ ರೂಟ್ | Photo Credit : PTI
ಲೀಡ್ಸ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ(ಡಬ್ಲ್ಯುಟಿಸಿ)ನಾಯಕನಾಗಿ 3,000 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಜೋ ರೂಟ್ ಇತಿಹಾಸ ನಿರ್ಮಿಸಿದ್ದಾರೆ.
ಲೀಡ್ಸ್ನ ಹೆಡ್ಡಿಂಗ್ಲೆಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟವಾದ ಶುಕ್ರವಾರ ಈ ಮೈಲಿಗಲ್ಲು ತಲುಪಲು ರೂಟ್ಗೆ 42 ರನ್ ಅಗತ್ಯವಿತ್ತು. ಯಾರ್ಕ್ಶೈರ್ ಬ್ಯಾಟರ್ ಔಟಾಗದೆ 37 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದರು. ಭೋಜನ ವಿರಾಮದ ನಂತರ ಉಳಿದ ಐದು ರನ್ ಸೇರಿಸಿದ ರೂಟ್ನಾಯಕನಾಗಿ ಒಟ್ಟು 3,000 ಡಬ್ಲ್ಯುಟಿಸಿ ರನ್ ಗಳಿಸಿದರು.
2026ರ ಜೂನ್ನಲ್ಲಿ ಬೆನ್ ಸ್ಟೋಕ್ಸ್ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ 35ರ ವಯಸ್ಸಿನ ರೂಟ್ ಮತ್ತೊಮ್ಮೆ ಇಂಗ್ಲೆಂಡ್ ನಾಯಕತ್ವ ವಹಿಸಿಕೊಂಡರು. ರೂಟ್ ಇದೀಗ ಡಬ್ಲ್ಯುಟಿಸಿ ನಾಯಕನಾಗಿ 63 ಇನಿಂಗ್ಸ್ಗಳಲ್ಲಿ 34 ಪಂದ್ಯಗಳಲ್ಲಿ 3,000 ರನ್ ಗಳಿಸಿದ್ದಾರೆ. 50.13ರ ಸರಾಸರಿಯಲ್ಲಿ ಎಂಟು ಶತಕ ಹಾಗೂ 13 ಅರ್ಧಶತಕಗಳನ್ನು ಗಳಿಸಿದ್ದು, 228 ಗರಿಷ್ಠ ಸ್ಕೋರಾಗಿದೆ.
ಡಬ್ಲ್ಯುಟಿಸಿ ಟೂರ್ನಿಯಲ್ಲಿ ನಾಯಕನಾಗಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ರೂಟ್ ಅಗ್ರ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಸ್ಟೋಕ್ಸ್ 40 ಪಂದ್ಯಗಳಲ್ಲಿ 2,182 ರನ್ ಗಳಿಸಿ ಎರಡನೇ ಸ್ಥಾನದಲ್ಲಿದೆ. ಆ ನಂತರ ಶ್ರೀಲಂಕಾದ ಡಿಮುತ್ ಕರುಣರತ್ನೆ 2,160 ರನ್ ಗಳಿಸಿದ್ದಾರೆ. ವೆಸ್ಟ್ಇಂಡೀಸ್ ತಂಡದ ನಾಯಕ ಕ್ರೆಗ್ ಬ್ರಾತ್ವೇಟ್ 1,994 ರನ್ ಗಳಿಸಿದ್ದು, ಪಾಕಿಸ್ತಾನದ ಆಟಗಾರ ಬಾಬರ್ ಆಝಂ 1,918 ರನ್ ಗಳಿಸಿದ್ದಾರೆ.






