ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ : ಕಾಂಪೌಂಡ್ ಆರ್ಚರಿಯಲ್ಲಿ ಸಂಗಮ್ಪ್ರೀತ್, ಅವನೀತ್ ಕೌರ್ ಚಾಂಪಿಯನ್

ಹೊಸದಿಲ್ಲಿ : ಚೀನಾದ ಚೆಂಗ್ಡುವಿನಲ್ಲಿ ಸೋಮವಾರ ನಡೆದ 31ನೇ ಆವೃತ್ತಿಯ ವರ್ಲ್ಡ್
ಯುನಿವರ್ಸಿಟಿ ಗೇಮ್ಸ್ನಲ್ಲಿ ತಮ್ಮ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದ ಸಂಗಮ್ಪ್ರೀತ್ ಸಿಂಗ್ ಬಿಸ್ಲಾ ಹಾಗೂ ಅವನೀತ್ ಕೌರ್ ಕಾಂಪೌಂಡ್ ಆರ್ಚರಿ ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ.
ಭಾರತವು ಪ್ರತಿಷ್ಠಿತ ಸ್ಪರ್ಧೆಯಲ್ಲಿ ಆರ್ಚರಿ ಕ್ರೀಡೆಯಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಜಯಿಸಿ ಗಮನಾರ್ಹ ಪ್ರದರ್ಶನ ನೀಡಿದೆ.
ಭಾರತವು ಒಟ್ಟಾರೆ 9 ಚಿನ್ನ, ಮೂರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಚೀನಾ 17 ಚಿನ್ನ, 5 ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಜಯಿಸಿ ಮೊದಲ ಸ್ಥಾನದಲ್ಲಿದೆ. ಆ ನಂತರ ಕೊರಿಯಾ(10 ಚಿನ್ನ, 10 ಬೆಳ್ಳಿ, 4 ಕಂಚು) ಹಾಗೂ ಜಪಾನ್(10 ಚಿನ್ನ, 6 ಬೆಳ್ಳಿ, 7 ಕಂಚು)ದೇಶಗಳಿವೆ.
ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಎಲ್ಲ ಚಿನ್ನದ ಪದಕ ಬಂದಿವೆ. ಬಿಸ್ಲಾ ಪುರುಷರ ವೈಯಕ್ತಿಕ ಪ್ರಶಸ್ತಿಯನ್ನು ಜಯಿಸಿದರೆ, ಅವನೀತ್ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಹಾಗೂ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಸೈನಿ ಹಾಗೂ ಪ್ರಗತಿ ಗೆಲುವು ದಾಖಲಿಸಿದ್ದಾರೆ.
ಭಾರತದ ಕಾಂಪೌಂಡ್ ಆರ್ಚರಿ ತಂಡ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡರೆ, ಅವನೀತ್, ಪುರ್ವೆಶಾ ಶಿಂಧೆ ಹಾಗೂ ಪ್ರಗತಿ ಗಮನೀಯ ಪ್ರದರ್ಶನ ನೀಡಿದರು.
ಚಿನ್ನ ಹಾಗೂ ಬೆಳ್ಳಿ ಪದಕಗಳಲ್ಲದೆ ಭಾರತದ ಕಾಂಪೌಂಡ್ ಬಿಲ್ಗಾರರು ಎರಡು ಕಂಚಿನ ಪದಕಗಳನ್ನು ಜಯಿಸಿದರು. ರಿಷಭ್ ಯಾದವ್, ಸೈನಿ ಹಾಗೂ ಬಿಸ್ಲಾ ಅವರನ್ನೊಳಗೊಂಡ ಪುರುಷರ ಟೀಮ್ ಹಾಗೂ ಸೈನಿ ಅವರನ್ನೊಳಗೊಂಡ ಪುರುಷರ ವೈಯಕ್ತಿಕ ವಿಭಾಗದಲ್ಲಿ ತಲಾ 1 ಕಂಚು ಜಯಿಸಿದ್ದಾರೆ. ಭಾರತದಿಂದ ರಿಕರ್ವ್ ಆರ್ಚರ್ಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದು, ಸಂಗೀತಾ, ತನಿಶಾ ವರ್ಮಾ ಹಾಗೂ ರೀಟಾ ಅವರನ್ನೊಳಗೊಂಡ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಏಕೈಕ ಕಂಚು ಜಯಿಸಿದ್ದಾರೆ.
ಪುರುಷರ ವೈಯಕ್ತಿಕ ಕಾಂಪೌಂಡ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾದ ಕ್ರಿಸ್ಟಿಯನ್
ಬೆಯೆರ್ಸ್ ಕ್ಲೆರ್ಕ್ರನ್ನು 149-147 ಅಂಕದಿಂದ ಮಣಿಸಿದ ಬಿಸ್ಲಾ ಚಿನ್ನದ ಪದಕ ಜಯಿಸಿದರು. ಈ ಹಿಂದೆ ಪ್ರಗತಿಯೊಂದಿಗೆ ಕಾಂಪೌಂಡ್ ಮಿಕ್ಸೆಡ್ ಟೀಮ್ನಲ್ಲಿ ಚಿನ್ನ ಜಯಿಸಿದ್ದ ಸೈನಿ ಫ್ರಾನ್ಸ್ನ ವಿಕ್ಟರ್ರನ್ನು 148-146 ಅಂತರದಿಂದ ಮಣಿಸಿ ಕಂಚಿನ ಪದಕಕ್ಕಾಗಿ ನಡೆದ ಪ್ಲೇಆಫ್ಗೆ
ತೇರ್ಗಡೆಯಾದರು. ಮೂರು ಪದಕಗಳನ್ನು (ತಲಾ ಒಂದು ಚಿನ್ನ ಹಾಗೂ 2 ಬೆಳ್ಳಿ)
ಜಯಿಸಿ ಗೇಮ್ಸ್ನ್ನು ಕೊನೆಗೊಳಿಸಿದರು.
ಅವನೀತ್ ಕೌರ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಫೈನಲ್ನಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದು ಅಮೆರಿಕದ ಅಲಿಸಾ ಸ್ಟರ್ಗಿಲ್ರನ್ನು ಶೂಟ್-ಆಫ್ನಲ್ಲಿ ರೋಚಕವಾಗಿ ಮಣಿಸಿದರು.ಐದು ಸುತ್ತಿನ ನಂತರ ಉಭಯ ಆಟಗಾರ್ತಿಯರು ತಲಾ 144 ಅಂಕ ಗಳಿಸಿದ್ದು, ಶೂಟ್ ಆಫ್ನಲ್ಲಿ ಅವನೀತ್ ಬರೋಬ್ಬರಿ 10 ಅಂಕ
ಗಳಿಸಿ ಚಿನ್ನ ಜಯಿಸಿದರು. ಅಲಿಸಾ 8 ಅಂಕ ಗಳಿಸಿದರು.
ಅವನೀತ್ ಈ ಮೊದಲು ಪುರ್ವೆಶಾ ಹಾಗೂ ಪ್ರಗತಿಯೊಂದಿಗೆ ಕಾಂಪೌಂಡ್ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಒಟ್ಟಾರೆಯಾಗಿ ಭಾರತದ ಕಾಂಪೌಂಡ್ ವಿಭಾಗದ ಬಿಲ್ಲುಗಾರರು 31ನೇ ಆವೃತ್ತಿಯ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ನಲ್ಲಿ ಅಮೋಘ ಪ್ರದರ್ಶನ ನೀಡಿ ದೇಶದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರ ಅತ್ಯುತ್ತಮ ಪ್ರದರ್ಶನವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ಹಾಗೂ ವೈಭವ ತಂದಿದೆ.