WPL 2027 ವೇಳಾಪಟ್ಟಿ ಪ್ರಕಟ | ವಡೋದರಾ, ಮುಂಬೈನಲ್ಲಿ ಪಂದ್ಯಾವಳಿ; ಜ.14ರಿಂದ ಚಾಲನೆ
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ RCB ಗೆ ಮುಂಬೈ ಇಂಡಿಯನ್ಸ್ ಸವಾಲು; ಫೆ. 7ರಂದು ಫೈನಲ್

Photo Credit: PTI
ಹೊಸದಿಲ್ಲಿ: ಮಹಿಳಾ ಪ್ರೀಮಿಯರ್ ಲೀಗ್ನ (WPL) ಐದನೇ ಆವೃತ್ತಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. 2027ರ ಜ. 14ರಿಂದ ಫೆ.7ರವರೆಗೆ ನಡೆಯಲಿರುವ ಈ ಟೂರ್ನಿಗೆ ವಡೋದರಾ ಮತ್ತು ಮುಂಬೈ ಆತಿಥ್ಯ ವಹಿಸಲಿವೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಜ. 14ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಲಿದೆ.
ಒಟ್ಟು 22 ಪಂದ್ಯಗಳನ್ನು ಒಳಗೊಂಡಿರುವ ಟೂರ್ನಿಯಲ್ಲಿ ವಡೋದರಾ ಮತ್ತು ಮುಂಬೈ ತಲಾ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಮೊದಲ ಹಂತದ ಪಂದ್ಯಗಳು ಜ. 14ರಿಂದ 24ರವರೆಗೆ ವಡೋದರದ ಕೋಟಂಬಿಯಲ್ಲಿರುವ BCA ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ಹಂತದಲ್ಲಿ ಐದೂ ತಂಡಗಳು ಸೆಣಸಾಡಲಿವೆ. ಜ. 15ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ನಂತರ ಟೂರ್ನಿಯು ಮುಂಬೈಗೆ ಸ್ಥಳಾಂತರಗೊಳ್ಳಲಿದೆ. ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (CCI) ನಿರ್ವಹಿಸುವ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಉಳಿದ ಲೀಗ್ ಪಂದ್ಯಗಳು, ಪ್ಲೇಆಫ್ ಗಳು ಮತ್ತು ಫೈನಲ್ ಪಂದ್ಯ ನಡೆಯಲಿವೆ.
ಮುಂಬೈ ಹಂತವು ಜ. 26ರಂದು ಆರಂಭವಾಗಲಿದ್ದು, ಅಂದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಲೀಗ್ ಹಂತವು ಫೆ. 3ರಂದು ಮುಕ್ತಾಯಗೊಳ್ಳಲಿದೆ. ಅಂದು ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಸೆಣಸಾಡಲಿವೆ.
ಟೂರ್ನಿಯ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿವೆ.
►ಮುಂಬೈನಲ್ಲಿ ಪ್ಲೇಆಫ್ ಪಂದ್ಯಗಳು
ಟೂರ್ನಿಯ ನಿರ್ಣಾಯಕ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಲೀಗ್ ಹಂತದಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯವು ಫೆ. 5ರಂದು ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್ ಗೆ ಅರ್ಹತೆ ಪಡೆಯಲಿದೆ. ಫೈನಲ್ ಪಂದ್ಯವು ಫೆ. 7ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಲೀಗ್ ಹಂತದ ಅಂತ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡವು ಟೂರ್ನಿಯಿಂದ ಹೊರಬೀಳಲಿದೆ.
"ವಡೋದರಾ ಹಂತವು ಜ. 24ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ 11 ಪಂದ್ಯಗಳು ನಡೆಯಲಿವೆ. ಐದೂ ತಂಡಗಳು ಪ್ರಶಸ್ತಿಗಾಗಿ ತಮ್ಮ ಅಭಿಯಾನವನ್ನು ಇಲ್ಲಿಂದಲೇ ಆರಂಭಿಸಲಿವೆ. ನಂತರ ಪಂದ್ಯಾವಳಿಯು ಮುಂಬೈಗೆ ಸ್ಥಳಾಂತರಗೊಳ್ಳಲಿದ್ದು, ಜ. 26ರಿಂದ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಉಳಿದ 11 ಪಂದ್ಯಗಳು ನಡೆಯಲಿವೆ" ಎಂದು BCCI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಐದು ತಂಡಗಳು ಭಾಗವಹಿಸಿದ್ದ ಹಿಂದಿನ ಆವೃತ್ತಿಯ ಪಂದ್ಯಗಳು ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣ ಮತ್ತು ವಡೋದರದಲ್ಲಿ ನಡೆದಿದ್ದವು. ಪ್ರಸ್ತುತ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಆವೃತ್ತಿಗೆ ಪಂದ್ಯಗಳ ಆತಿಥ್ಯ ವಹಿಸುವ ಸ್ಥಳಗಳಲ್ಲಿ ಬದಲಾವಣೆ ಮಾಡಲಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ RCB ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳ ನಡುವಿನ ಸೆಣಸಾಟದೊಂದಿಗೆ 2027ರ ಆವೃತ್ತಿಗೆ ಚಾಲನೆ ದೊರೆಯಲಿದೆ.
►WPL 2027: ಸಂಪೂರ್ಣ ವೇಳಾಪಟ್ಟಿ
►ವಡೋದರಾ
1. ಜ. 14, ಗುರುವಾರ: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್
2. ಜ. 15, ಶುಕ್ರವಾರ: ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್
3. ಜ. 16, ಶನಿವಾರ: ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
4. ಜ. 17, ರವಿವಾರ: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್
5. ಜ. 18, ಸೋಮವಾರ: ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್
6. ಜ. 19, ಮಂಗಳವಾರ: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್
7. ಜ. 20, ಬುಧವಾರ: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್
8. ಜ. 21, ಗುರುವಾರ: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
9. ಜ. 22, ಶುಕ್ರವಾರ: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
10. ಜ. 23, ಶನಿವಾರ: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
11. ಜ. 24, ರವಿವಾರ: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್
ಜ. 25: ವಿಶ್ರಾಂತಿ ದಿನ.
►ಮುಂಬೈ
12. ಜ. 26, ಮಂಗಳವಾರ: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
13. ಜ. 27, ಬುಧವಾರ: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್
14. ಜ. 28, ಗುರುವಾರ: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್
15. ಜ. 29, ಶುಕ್ರವಾರ: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್
16. ಜ. 30, ಶನಿವಾರ: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್
17. ಜ. 31, ರವಿವಾರ: ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
18. ಫೆ. 1, ಸೋಮವಾರ: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
19. ಫೆ. 2, ಮಂಗಳವಾರ: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್
20. ಫೆ. 3, ಬುಧವಾರ: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್
ಫೆ. 4: ವಿಶ್ರಾಂತಿ ದಿನ.
21. ಫೆ. 5, ಶುಕ್ರವಾರ: ಎಲಿಮಿನೇಟರ್ ಪಂದ್ಯ
22. ಫೆ. 7, ರವಿವಾರ: ಫೈನಲ್ ಪಂದ್ಯ
ಪಂದ್ಯಗಳ ಸಮಯ: ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿವೆ.






