ನ.27ರಂದು ಹೊಸದಿಲ್ಲಿಯಲ್ಲಿ ಡಬ್ಲ್ಯುಪಿಎಲ್ ಹರಾಜು

Credits: Twitter
ಜೈಪುರ, ನ.4: ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಹರಾಜು ಪ್ರಕ್ರಿಯೆಯು ನವೆಂಬರ್ 27ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ.
ಒಂದು ದಿನದ ಹರಾಜು ಕಾರ್ಯಕ್ರಮವು ಖಾಸಗಿ ಹೋಟೆಲ್ನಲ್ಲಿ ನಡೆಯಲಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆ.
ಪ್ರತೀ ತಂಡಗಳು ಗರಿಷ್ಠ 18 ಆಟಗಾರ್ತಿಯರನ್ನು ಹೊಂದಲಿದ್ದು, ಐದು ತಂಡಗಳನ್ನು ಸೇರಲು ಸುಮಾರು 90 ಆಟಗಾರ್ತಿಯರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.
ಗರಿಷ್ಠ ಐವರು ಆಟಗಾರ್ತಿಯರನ್ನು (ಭಾರತದ ಮೂವರು ಹಾಗೂ ವಿದೇಶದ ಇಬ್ಬರು ಆಟಗಾರ್ತಿಯರು)ಉಳಿಸಿಕೊಳ್ಳಬಹುದು ಎಂದು ಬಿಸಿಸಿಐ ಈ ಹಿಂದೆ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿತ್ತು. ಒಂದು ವೇಳೆ ಫ್ರಾಂಚೈಸಿ ಐವರು ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಬಯಸಿದರೆ, ಭಾರತದ ಓರ್ವ ಹೊಸ ಆಟಗಾರ್ತಿಗೆ ಅವಕಾಶ ನೀಡಬೇಕು.
ಬಿಸಿಸಿಐ ಹರಾಜು ಮೊತ್ತವನ್ನು 15 ಕೋ.ರೂ.ಗೆ ನಿಗದಿಪಡಿಸಿದೆ. ವಿವಿಧ ರಿಟೆನ್ಶನ್ ಸ್ಲ್ಯಾಬ್ಗಳಿವೆ. ಪ್ಲೇಯರ್-1ಗೆ 3.5 ಕೋ.ರೂ.,. ಪ್ಲೇಯರ್ 2: 2.5 ಕೋ.ರೂ. ಪ್ಲೇಯರ್-3: 1.75 ಕೋ.ರೂ., ಪ್ಲೇಯರ್-4: 1 ಕೋ.ರೂ. ನಿಗದಿಪಡಿಸಲಾಗಿದೆ. ಐದನೇ ಆಟಗಾರ್ತಿಗೆ 50 ಲಕ್ಷ ಮೂಲಬೆಲೆ ಇರಲಿದೆ.
ತಂಡಗಳು ತಮ್ಮಲ್ಲೇ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ನ.5ರಂದು ಸಲ್ಲಿಸಬೇಕು. ನ.18 ಆಟಗಾರ್ತಿಯರ ನೋಂದಣಿಗೆ ಕೊನೆಯ ದಿನವಾಗಿದೆ.





