ಜ. 14, 15ರ ಡಬ್ಲ್ಯುಪಿಎಲ್ ಪಂದ್ಯಗಳು ಮುಚ್ಚಿದ ಸ್ಟೇಡಿಯಮ್ನಲ್ಲಿ?

ಸಾಂದರ್ಭಿಕ ಚಿತ್ರ
ನವಿ ಮುಂಬೈ, ಜ. 12: ಜನವರಿ 14 ಮತ್ತು 15ರಂದು ನವಿ ಮುಂಬೈಯಲ್ಲಿ ನಡೆಯಲಿರುವ ಎರಡು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯಗಳು ಮುಚ್ಚಿದ ಸ್ಟೇಡಿಯಮ್ನಲ್ಲಿ ನಡೆಯುವ ಸಾಧ್ಯತೆಯಿದೆ. ಆ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವುದರಿಂದ ಪಂದ್ಯಗಳಿಗೆ ಭದ್ರತೆ ನೀಡಲು ಪೊಲೀಸರು ಲಭ್ಯರಿಲ್ಲದಿರುವುದು ಇದಕ್ಕೆ ಕಾರಣವಾಗಿದೆ.
ಮುಂಬೈ ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಜನವರಿ 15ರಂದು ಮತದಾನ ನಡೆಯಲಿದೆ. ಹೀಗಾಗಿ, ಆ ದಿನ ಡಬ್ಲ್ಯುಪಿಎಲ್ ಪಂದ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿ ಪೊಲೀಸರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪತ್ರ ಬರೆದಿದ್ದಾರೆ. ಹೀಗಾಗಿ, ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆಗೆ ಬಿಸಿಸಿಐ ಒಳಗಾಗಿದೆ.
‘‘ಜನವರಿ 14 ಮತ್ತು 15ರ ಎರಡು ಪಂದ್ಯಗಳನ್ನು ನಾವು ಪ್ರೇಕ್ಷಕರಿಲ್ಲದೆ ಆಡಿಸಬೇಕಾಗಬಹುದು. ಪೊಲೀಸರು ಬರೆದ ಪತ್ರದ ಬಳಿಕ ನಾವು ಈ ಕ್ರಮದ ಬಗ್ಗೆ ಯೋಚಿಸುತ್ತಿದ್ದೇವೆ. ಆದರೆ, ಈಗಿನವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ’’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯ ಸೋಮವಾರ ‘ಸ್ಪೋರ್ಟ್ಸ್ಸ್ಟಾರ್’ಗೆ ತಿಳಿಸಿದ್ದಾರೆ.
ಡಬ್ಲ್ಯುಪಿಎಲ್ ನಾಲ್ಕನೇ ಋತುವಿನ ಮೊದಲ ಹಂತದ ಪಂದ್ಯಗಳು ನವಿ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿವೆ. ಎರಡನೇ ಹಂತದ ಹಾಗೂ ಫೈನಲ್ ಪಂದ್ಯಗಳು ವಡೋದರದಲ್ಲಿ ನಡೆಯಲಿವೆ.
ಡಿ.ವೈ. ಪಾಟೀಲ್ ಸ್ಟೇಡಿಯಮ್ ಮಹಿಳಾ ಕ್ರಿಕೆಟ್ನ ನಿಯಮಿತ ಸ್ಟೇಡಿಯಮ್ ಆಗಿರುವುದರಿಂದ ಡಬ್ಲ್ಯುಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಒಂದು ವೇಳೆ ಪಂದ್ಯಗಳನ್ನು ಮುಚ್ಚಿದ ಸ್ಟೇಡಿಯಮ್ನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದರೆ, ಜನವರಿ 14ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್–ಯುಪಿ ವಾರಿಯರ್ಸ್ ಹಾಗೂ ಜನವರಿ 15ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್–ಯುಪಿ ವಾರಿಯರ್ಸ್ ಪಂದ್ಯಗಳ ವೀಕ್ಷಣೆಯಿಂದ ಅಭಿಮಾನಿಗಳು ವಂಚಿತರಾಗುತ್ತಾರೆ.







