ಕುಸ್ತಿ : ವಿನೇಶ್ ಫೋಗಟ್ ಸೆಮಿ ಫೈನಲ್ ಗೆ

ವಿನೇಶ್ ಪೋಗಟ್ | PTI
ಪ್ಯಾರಿಸ್ : ಭಾರತದ ಹಿರಿಯ ಕುಸ್ತಿತಾರೆ ವಿನೇಶ್ ಪೋಗಟ್ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಜಪಾನ್ ನ ಯು ಸುಸಾಕಿ ಹಾಗೂ ಉಕ್ರೇನ್ ನ ಗರಿಷ್ಠ ರ್ಯಾಂಕಿನ ಒಕ್ಸಾನಾ ಲಿವಾಚ್ ರನ್ನು ಮಣಿಸಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟರು.
29ರ ಹರೆಯದ ವಿನೇಶ್ ತೀವ್ರ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್ ಫೈನಲ್ ನಲ್ಲಿ ಮಾಜಿ ಯುರೋಪಿಯನ್ ಚಾಂಪಿಯನ್, ಮೂರು ಬಾರಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತೆ ಹಾಗೂ 2018ರ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿರುವ ಲಿವಾಚ್ ರನ್ನು 7-5 ಅಂತರದಿಂದ ಸೋಲಿಸಿದರು.
ಇದಕ್ಕೂ ಮೊದಲು ನಡೆದಿದ್ದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಹಾಗೂ 3 ವರ್ಷಗಳ ಹಿಂದೆ ಟೋಕಿಯೊದಲ್ಲಿ ಒಂದೂ ಅಂಕ ಕೈಚೆಲ್ಲದೆ ಒಲಿಂಪಿಕ್ಸ್ ಚಿನ್ನ ಗೆದ್ದಿದ್ದ ಜಪಾನ್ ನ ಸುಸಾಕಿ ಅವರನ್ನು 3-2 ಅಂತರದಿಂದ ಸೋಲಿಸಿ ಮಹತ್ವದ ಸಾಧನೆ ಮಾಡಿದರು.
ವಿನೇಶ್ ಸೆಮಿ ಫೈನಲ್ ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಝ್ಮನ್ ಲೊಪೆಝ್ ರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ವಿನೇಶ್ ಜಯ ಸಾಧಿಸಿದರೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಲಿದೆ. ಒಂದು ವೇಳೆ ಸೋತರೆ ಕಂಚಿನ ಪದಕಕ್ಕಾಗಿ ಪ್ಲೇ ಆಫ್ ಸುತ್ತಿನಲ್ಲಿ ಆಡಲಿದ್ದಾರೆ.
ವಿನೇಶ್ ಇದೇ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. 2016ರ ರಿಯೋ ಹಾಗೂ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ವಿನೇಶ್ ಕ್ವಾರ್ಟರ್ ಫೈನಲ್ನಲ್ಲಿ ಸೋತು ನಿರ್ಗಮಿಸಿದ್ದರು. 2016ರಲ್ಲಿ ತನ್ನ ಪಂದ್ಯದ ವೇಳೆಯೇ ವಿನೇಶ್ ಗಾಯಗೊಂಡಿದ್ದರು.ಹೀಗಾಗಿ ಗಾಯಾಳು ನಿವೃತ್ತಿಯಾಗಿದ್ದರು. ಇದೀಗ 3ನೇ ಬಾರಿ ಒಲಿಂಪಿಕ್ ಗೇಮ್ಸ್ ನಲ್ಲಿ ಸ್ಪರ್ಧಿಸುತ್ತಿರುವ ವಿನೇಶ್ ಪದಕ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.







