ಡಬ್ಲ್ಯುಟಿಎ ರ್ಯಾಂಕಿಂಗ್: 3ನೇ ಸ್ಥಾನಕ್ಕೇರಿದ ವಿಂಬಲ್ಡನ್ ಚಾಂಪಿಯನ್ ಸ್ವಿಯಾಟೆಕ್

Swiatek, Photo: Twitter
ಪ್ಯಾರಿಸ್, ಜು.14: ನೂತನ ವಿಂಬಲ್ಡನ್ ಚಾಂಪಿಯನ್ ಇಗಾ ಸ್ವಿಯಾಟೆಕ್ ಸೋಮವಾರ ಬಿಡುಗಡೆಯಾಗಿರುವ ಡಬ್ಲ್ಯುಟಿಎ ರ್ಯಾಂಕಿಂಗ್ ನಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ರನ್ನರ್-ಅಪ್ ಅಮಂಡಾ ಅನಿಸಿಮೋವಾ ಅವರು ಇದೇ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
ಶನಿವಾರ ನಡೆದ ಫೈನಲ್ನಲ್ಲಿ ಅಮೆರಿಕದ ಅನಿಸಿಮೋವಾರನ್ನು 6-0 6-0 ನೇರ ಸೆಟ್ಗಳ ಅಂತರದಿಂದ ಸೋಲಿಸಿರುವ ವಿಶ್ವದ ಮಾಜಿ ನಂ.1 ಆಟಗಾರ ಸ್ವಿಯಾಟೆಕ್ ತನ್ನ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಹಾಗೂ ಒಟ್ಟಾರೆ ಆರನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಪೋಲ್ಯಾಂಡ್ ಆಟಗಾರ್ತಿ ಜೆಸ್ಸಿಕಾ ಪೆಗುಲಾರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದರು. ಪೆಗುಲಾ ಆರಂಭಿಕ ಸುತ್ತಿನಲ್ಲಿ ಸೋತಿದ್ದರು.
ಕಳೆದ ವರ್ಷದ ಚಾಂಪಿಯನ್ ಶಿಪ್ ನಲ್ಲಿ ಪ್ರಧಾನ ಸುತ್ತಿಗೇರುವಲ್ಲಿ ವಿಫಲರಾಗಿದ್ದ ಅನಿಸಿಮೋವಾ ಇದೀಗ 8 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಆರ್ಯನಾ ಸಬಲೆಂಕಾ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಅಮೆರಿಕದ ಆಟಗಾರ್ತಿ ಕೊಕೊ ಗೌಫ್ 2ನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್ ಓಪನ್ ವಿಜೇತೆ ಗೌಫ್ ವಿಂಬಲ್ಡನ್ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದರು.
ವಿಂಬಲ್ಡನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ರಶ್ಯದ 18ರ ಹರೆಯದ ಆಟಗಾರ್ತಿ ಮಿರ್ರಾ ಆಂಡ್ರೀವಾ ಇದೇ ಮೊದಲ ಬಾರಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ. 2ನೇ ಸುತ್ತಿನಲ್ಲಿ ಸೋತಿದ್ದ ಜಾಸ್ಮಿನ್ ಪಯೋಲಿನಿ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟಾಪ್-10 ರ್ಯಾಂಕಿಂಗ್:
1. ಆರ್ಯನಾ ಸಬಲೆಂಕಾ, 2. ಕೊಕೊ ಗೌಫ್(ಅಮೆರಿಕ), 3. ಇಗಾ ಸ್ವಿಯಾಟೆಕ್(ಪೋಲ್ಯಾಂಡ್), 4. ಜೆಸ್ಸಿಕಾ ಪೆಗುಲಾ(ಅಮೆರಿಕ), 5. ಮಿರ್ರಾ ಆಂಡ್ರೀವಾ, 6. ಕ್ವಿನ್ವೆನ್ ಝೆಂಗ್(ಚೀನಾ), 7. ಅಮಂಡಾ ಅನಿಸಿಮೋವಾ(ಅಮೆರಿಕ), 8. ಮ್ಯಾಡಿಸನ್ ಕೀಸ್(ಅಮೆರಿಕ), 9. ಜಾಸ್ಮಿನ್ ಪಯೋಲಿನಿ(ಇಟಲಿ), 10. ಪೌಲಾ ಬಡೋಸಾ(ಸ್ಪೇನ್).







