WWE ದಿಗ್ಗಜ ಹಲ್ಕ್ ಹೋಗನ್ ನಿಧನ

ಹಲ್ಕ್ ಹೋಗನ್ (Photo credit: Evan Agostini/Invision/AP)
ಫ್ಲೋರಿಡಾ: ವಿಶ್ವ ಕುಸ್ತಿ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದ ಐತಿಹಾಸಿಕ ದಂತಕಥೆ, ವೃತ್ತಿಪರ ಕುಸ್ತಿಪಟು ಹಾಗೂ WWE ಹಾಲ್ ಆಫ್ ಫೇಮ್ ಹಲ್ಕ್ ಹೋಗನ್ (70) ಗುರುವಾರ ಹೃದಯಾಘಾತದಿಂದ ನಿಧನರಾದರು ಎಂದು WWE ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಟೆರ್ರಿ ಜೀನ್ ಬೊಲಿಯಾ ಎಂಬುದು ಅವರ ನಿಜನಾಮ. ಫ್ಲೋರಿಡಾದ ಕ್ಲಿಯರ್ವಾಟರ್ನಲ್ಲಿನ ಅವರ ನಿವಾಸದಲ್ಲಿ ತೀವ್ರ ಅಸ್ವಸ್ಥತೆಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು NewyorkPost ವರದಿ ಮಾಡಿದೆ.
“ಹಲ್ಕ್ ಹೋಗನ್ ಅವರ ನಿಧನಕ್ಕೆ WWE ತೀವ್ರ ಸಂತಾಪ ಸೂಚಿಸುತ್ತದೆ. 1980ರ ದಶಕದಲ್ಲಿ WWE ಜಾಗತಿಕ ಜನಪ್ರಿಯತೆಯನ್ನು ಗಳಿಸಲು ಸಹಾಯ ಮಾಡಿದವರು ಅವರು. ಅವರು ಪಾಪ್ ಸಂಸ್ಕೃತಿಯ ಇತಿಹಾಸದಲ್ಲಿಯೇ ಅತ್ಯಂತ ಗುರುತಿಸಿಕೊಂಡ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು" ಎಂದು WWE ತನ್ನ ಅಧಿಕೃತ X ಖಾತೆಯಲ್ಲಿ ಬರೆದು ಸಂತಾಪ ಸೂಚಿಸಿದೆ.
1970ರ ದಶಕದಲ್ಲಿ ಫ್ಲೋರಿಡಾದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಹೋಗನ್, ತಮ್ಮ ಆಲ್ ಅಮೆರಿಕನ್ ವ್ಯಕ್ತಿತ್ವ “ಹಲ್ಕಮೇನಿಯಾ” ಮೂಲಕ 1980ರ ದಶಕದಲ್ಲಿ ವಿಶ್ವದ ಕುಸ್ತಿ ಪ್ರೇಮಿಗಳ ಹೃದಯ ಗೆದ್ದವರು. ಪ್ರಾರಂಭದಲ್ಲಿ WWF ಎಂದು ಕರೆಯಲ್ಪಡುತ್ತಿದ್ದ WWEಯ ಪ್ರಮುಖ ಆಕರ್ಷಣೆಯಾಗಿ ರೆಸಲ್ಮೇನಿಯಾ ಮೊದಲ ಶೋವಿನಲ್ಲಿ ಮಿಸ್ಟರ್ ಟಿ ಜೊತೆ ಪಾಲ್ ಆರ್ಡಾರ್ಫ್ ಮತ್ತು ರಾಡಿ ಪೈಪರ್ ಅವರನ್ನು ಸೋಲಿಸಿದ ಕ್ಷಣ, ಕುಸ್ತಿ ಇತಿಹಾಸದಲ್ಲಿ ಎಂದಿಗೂ ನೆನಪಿನಲ್ಲಿ ಉಳಿಯುವಂತಹದ್ದು.
ಚಿತ್ರರಂಗ ಮತ್ತು ಟೆಲಿವಿಷನ್ ಪ್ರವೇಶ:
ಹಾಲಿವುಡ್ ಗೂ ಕಾಲಿಟ್ಟ ಹೊಗನ್, ರಾಕಿ III ನಲ್ಲಿ “ಥಂಡರ್ಲಿಪ್ಸ್” ಪಾತ್ರದಿಂದ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದರು. ನಂತರ ನೋ ಹೋಲ್ಡ್ಸ್ ಬ್ಯಾರೆಡ್, ಮಿಸ್ಟರ್ ನ್ಯಾನಿ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿ, ಟಿವಿ ಧಾರಾವಾಹಿಗಳಾದ ಥಂಡರ್ ಇನ್ ಪ್ಯಾರಡೈಸ್, ದಿ ಎ-ಟೀಮ್, ಬೇವಾಚ್ ಮುಂತಾದಗಳಲ್ಲಿ ಕಾಣಿಸಿಕೊಂಡರು. VH1 ಚಾನೆಲ್ನಲ್ಲಿ Hogan Knows Best ಎಂಬ ರಿಯಾಲಿಟಿ ಶೋ ಕೂಡ ಅಪಾರ ಪ್ರೇಕ್ಷಕರನ್ನು ಸೆಳೆದಿತ್ತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಚಟುವಟಿಕೆಗೆ ಬೆಂಬಲ ನೀಡಿದ ಅವರು, ಜುಲೈ 2024 ರಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿಯೂ ಭಾಗವಹಿಸಿದ್ದರು. ಅವರು WWE ಯಲ್ಲಿ ಕೊನೆಯ ಬಾರಿಗೆ ಜನವರಿಯಲ್ಲಿ ನೆಟ್ಫ್ಲಿಕ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು.







