ವೈಭವ್ ಸೂರ್ಯವಂಶಿ ಜೆರ್ಸಿ ಧರಿಸಿದ ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್; ವಿಡಿಯೊ ವೈರಲ್

Photo: x.com/Aditya_rraj
ರಾಜಸ್ಥಾನ ರಾಯಲ್ಸ್ ತಂಡದ ಯುವಪ್ರತಿಭೆ ವೈಭವ್ ಸೂರ್ಯವಂಶಿಯವರ ಹೆಸರು ಇರುವ ಜೆರ್ಸಿಯನ್ನು ಧರಿಸಿರುವ ಜಿಮ್ ವಿಡಿಯೊ ಪೋಸ್ಟ್ ಮಾಡಿರುವ ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಡ್ರ್ಯೂ ಮೆಕ್ಲಿಂಟೈರ್ ನೆಟ್ಟಿಗರ ಗಮನ ಸೆಳೆದಿದ್ದಾರೆ.
ತಮ್ಮ ಜಾಲತಾಣ ಪೋಸ್ಟ್ನಲ್ಲಿ ಮೆಕ್ಲಿಂಟೈರ್, "ಚೋಸನ್ ವನ್" ಎಂಬ ಶೀರ್ಷಿಕೆ ಬರೆದಿದ್ದಾರೆ. ಐಪಿಎಲ್ನ ಎಲಿಮಿನೇಟರ್ನಲ್ಲಿ ಇಂದು ರಾಜಸ್ಥಾನ ರಾಯಲ್ಸ್ ತಂಡ, ಸನ್ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸುತ್ತಿದ್ದು, ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ.
ಕಾಯಂ ನಾಯಕ ಪ್ಯಾಟ್ ಕಮಿನ್ಸ್ ಮರಳಿದ ಬಳಿಕ ಏಳು ಲೀಗ್ ಪಂದ್ಯಗಳ ಪೈಕಿ ಐದನ್ನು ಗೆದ್ದು ಅಂಕಪಟ್ಟಿಯಲ್ಲಿ ಮೂರಕ್ಕೇರಿದ ಎಸ್ಆರ್ಎಚ್ ತಂಡ ಎಲಿಮಿನೇಟರ್ನಲ್ಲಿ 15 ವರ್ಷದ ಪೋರನ ಸವಾಲನ್ನು ಎದುರಿಸುತ್ತಿದೆ. ಲೀಗ್ ಹಂತದಲ್ಲಿ ಈಗಾಗಲೇ ಎರಡು ಬಾರಿ ಆರ್ಆರ್ ತಂಡವನ್ನು ಎಸ್ಆರ್ಎಚ್ ಸೋಲಿಸಿದ ಹಿನ್ನೆಲೆಯಲ್ಲಿ ನಾಕೌಟ್ ಪಂದ್ಯದಲ್ಲಿ ಸಹಜವಾಗಿಯೇ ಎಸ್ಆರ್ಎಚ್ ವಿಶ್ವಾಸ ಹೆಚ್ಚಿದೆ.
ಇದಕ್ಕೆ ವಿರುದ್ಧವಾಗಿ ಆರ್ಆರ್ ತಂಡ ಲೀಗ್ ಹಂತದ ಕೊನೆಯ ದಿನ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ರಿಯಾನ್ ಪರಾಗ್ ಪೂರ್ಣಾವಧಿ ನಾಯಕನಾಗಿ ಮೊದಲ ಸೀಸನ್ನಲ್ಲಿ ಆಡುತ್ತಿದ್ದು, ಟೂರ್ನಿಯಲ್ಲಿ ಮುನ್ನಡೆಯುವ ಹರಸಾಹಸ ಮಾಡುತ್ತಿದೆ. ಆರ್ಆರ್ ಬ್ಯಾಟಿಂಗ್ ಪ್ರಮುಖವಾಗಿ ಅಗ್ರ ಕ್ರಮಾಂಕವನ್ನು ಆಧರಿಸಿದ್ದು, ಸೂರ್ಯವಂಶಿ 14 ಪಂದ್ಯಗಳಿಂದ 583 ರನ್ ಕಲೆ ಹಾಕಿದ್ದರೆ, ಯಶಸ್ವಿ ಜೈಸ್ವಾಲ್ 397 ಹಾಗೂ ಧ್ರುವ ಜುರೇಲ್ 458 ರನ್ ಸಿಡಿಸಿದ್ದಾರೆ.
ಎಸ್ಆರ್ಎಚ್ ಕೂಡಾ ಅಗ್ರಕ್ರಮಾಂಕದ ಅಭಿಷೇಕ್ ಶರ್ಮಾ (563), ಟ್ರಾವಿಸ್ ಹೆಡ್ (393) ಮತ್ತು ಇಶಾನ್ ಕಿಶನ್ (569) ಅವರ ಸಾಧನೆಯನ್ನು ಅವಲಂಬಿಸಿದೆ. ಹೆನ್ರಿಚ್ ಕ್ಲಾಸನ್ ಕೂಡಾ ನಾಲ್ಕನೇ ಕ್ರಮಾಂಕದಲ್ಲಿ 606 ರನ್ ಕಲೆ ಹಾಕಿ ತಂಡದ ಮುನ್ನಡೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಸೀಸನ್ನಲ್ಲಿ ಬ್ಯಾಟಿಂಗ್ ಹಾಗೂ ನಾಯಕತ್ವ ಎರಡೂ ವಿಚಾರದಲ್ಲಿ ವ್ಯಾಪಕ ಟೀಕೆಗೆ ಪರಾಗ್ ಗುರಿಯಾಗಿದ್ದರೂ, ಅವರ ನಾಯಕತ್ವದಲ್ಲಿ ಪ್ಲೇಆಫ್ಗೆ ಲಗ್ಗೆ ಇಡುವಲ್ಲಿ ಆರ್ಆರ್ ಯಶಸ್ವಿಯಾಗಿದೆ.






