ಗೊಂದಲದಿಂದ ರನೌಟ್ ಆದ ಜೈಸ್ವಾಲ್ : 3ನೇ ದ್ವಿಶತಕದ ಕನಸು ಭಗ್ನ

Photo : Twitter
ಹೊಸದಿಲ್ಲಿ, ಅ. 11: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ನ ಎರಡನೇ ದಿನವಾದ ಶನಿವಾರ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಗೆ ದುರದೃಷ್ಟವಶಾತ್ ದ್ವಿಶತಕವನ್ನು ಪೂರೈಸಲು ಸಾಧ್ಯವಾಗಲಿಲ್ಲ. ನಾಯಕ ಶುಭಮನ್ ಗಿಲ್ರೊಂದಿಗೆ ಸಂವಹನ ವೈಫಲ್ಯದಿಂದಾಗಿ ಅವರು ರನೌಟ್ ಆದರು.
ಶನಿವಾರ, ಮುನ್ನಾ ದಿನದ ತನ್ನ ವೈಯಕ್ತಿಕ ಮೊತ್ತ 173ರಿಂದ ಬ್ಯಾಟಿಂಗ್ ಮುಂದುವರಿಸಿದ ಜೈಸ್ವಾಲ್, ಟೆಸ್ಟ್ನಲ್ಲಿ ಮೂರನೇ ದ್ವಿಶತಕ ಬಾರಿಸುವತ್ತ ಮುನ್ನಡೆಯುತ್ತಿದ್ದರು. ಆದರೆ, ಅವರ ಭವ್ಯ ಇನಿಂಗ್ಸ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಕೊನೆಗೊಂಡಿತು. ಜೈಸ್ವಾಲ್ ಮಿಡ್-ಆಫ್ನತ್ತ ಚೆಂಡನ್ನು ತಳ್ಳಿ, ರನ್ಗಾಗಿ ಪಿಚ್ನಲ್ಲಿ ಅರ್ಧದಷ್ಟು ಓಡಿದರು. ಆದರೆ ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ನಾಯಕ ಶುಭಮನ್ ಗಿಲ್ ಅವರನ್ನು ಹಿಂದೆ ಕಳುಹಿಸಿದರು. ಆದರೆ, ಸುರಕ್ಷಿತವಾಗಿ ತನ್ನ ಕ್ರೀಸ್ ಗೆ ಹಿಂದಿರುಗಲು ಅವರಿಗೆ ಸಾಕಷ್ಟು ಸಮಯವಿರಲಿಲ್ಲ. ಅವರು ರನೌಟ್ ಆದರು. ಅದಕ್ಕೂ ಮೊದಲು 175 ರನ್ ಗಳಿಸಿದ್ದರು.
ರನೌಟ್ ಘಟನೆಯ ಬಳಿಕ, ಜೈಸ್ವಾಲ್ ಮತ್ತು ಗಿಲ್ ಸ್ವಲ್ಪ ಕಾವೇರಿದ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು. ಅನಿವಾರ್ಯವಾಗಿ ಅವರು ಮೂರನೇ ದ್ವಿಶತಕವಿಲ್ಲದೆ ಪೆವಿಲಿಯನ್ಗೆ ಹಿಂದಿರುಗಬೇಕಾಯಿತು.
Whose fault here in runout ? Shubman gill or yashasvi Jaiswalpic.twitter.com/XE7vuF1w9k
— Aman. (@CricMerphy) October 11, 2025







