ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್ ಹಂತ: ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ ಲಭ್ಯ

ಯಶಸ್ವಿ ಜೈಸ್ವಾಲ್ | Photo Credit : BCCI
ಮುಂಬೈ: 2025-26ರ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತಕ್ಕೆ ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ತಂಡಕ್ಕೆ ಲಭ್ಯವಿರಲಿದ್ದಾರೆ.
ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ತನ್ನ ಚೊಚ್ಚಲ ಶತಕ ಗಳಿಸಿರುವ ಭಾರತದ ಯುವ ಸ್ಟಾರ್ ಬ್ಯಾಟರ್ ಜೈಸ್ವಾಲ್ ಪುಣೆಯಲ್ಲಿ ಡಿಸೆಂಬರ್ 11ರಂದು ನಡೆಯಲಿರುವ ದೇಶೀಯ ಟಿ-20 ಪಂದ್ಯಕ್ಕೆ ಲಭ್ಯವಿರುವುದಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಗೆ (ಎಂಸಿಎ)ಮಾಹಿತಿ ನೀಡಿದ್ದಾರೆ.
‘‘ನಾನು ಇಂದು ಬೆಳಗ್ಗೆ ಅವರೊಂದಿಗೆ ಮಾತನಾಡಿದ್ದೇನೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಲಭ್ಯವಿರುವುದಾಗಿ ಅವರು ಹೇಳಿದ್ದಾರೆ. ಇದು ತಂಡಕ್ಕೆ ನಿಜವಾಗಿಯೂ ಶಕ್ತಿ ನೀಡಲಿದೆ’’ಎಂದು ಮುಂಬೈ ತಂಡದ ಮುಖ್ಯ ಆಯ್ಕೆಗಾರ ಸಂಜಯ್ ಪಾಟೀಲ್ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರು ಮುಂಬೈ ಪರ ಟಿ-20 ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಇನ್ನೂ ಸ್ಪಷ್ಟತೆ ಇಲ್ಲವಾಗಿದೆ.
ಲಕ್ನೊದಲ್ಲಿ ಆಡಿದ ಗ್ರೂಪ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿರುವ ಮುಂಬೈ ತಂಡವು ಸೂಪರ್ ಲೀಗ್ ಪಂದ್ಯದಲ್ಲಿ ಆಡಲು ಪುಣೆಗೆ ಪ್ರಯಾಣಿಸಲಿದೆ. ತನ್ನ ಭಾಗವಹಿಸುವಿಕೆ ಕುರಿತಂತೆ ರೋಹಿತ್ ಅವರು ಎಂಸಿಎಗೆ ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 28 ಪಂದ್ಯಗಳಲ್ಲಿ ಆಡಿರುವ ಜೈಸ್ವಾಲ್ 26 ಇನಿಂಗ್ಸ್ಗಳಲ್ಲಿ 648 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ.







