ಆಸ್ಟ್ರೇಲಿಯ ಪ್ರವಾಸಕ್ಕೆ ಹೋಗುವ ಭಾರತ ಅಂಡರ್-19 ತಂಡಕ್ಕೆ ಯೆರೆ ಗೌಡ ಪ್ರಧಾನ ಕೋಚ್

ಯೆರೆ ಗೌಡ |PC: KSCA
ಮುಂಬೈ, ಸೆ. 8: ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಅಂಡರ್-19 ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ರೈಲ್ವೇಸ್ ಹಾಗೂ ಕರ್ನಾಟಕ ತಂಡದ ಮಾಜಿ ಬ್ಯಾಟರ್ ಯೆರೆ ಗೌಡರನ್ನು ನೇಮಿಸಲಾಗಿದೆ.
ಭಾರತ ಅಂಡರ್-19 ತಂಡವು ಸೆಪ್ಟಂಬರ್ 16ರಂದು ಆಸ್ಟ್ರೇಲಿಯಕ್ಕೆ ತೆರಳುತ್ತದೆ ಮತ್ತು ಅಕ್ಟೋಬರ್ 10ರಂದು ಮರಳುತ್ತದೆ. ಅದು ಈ ಅವಧಿಯಲ್ಲಿ ಆಸ್ಟ್ರೇಲಿಯ ಅಂಡರ್-19 ತಂಡದ ವಿರುದ್ಧ (ಸೆಪ್ಟಂಬರ್ 21ರಿಂದ) 3 ಏಕದಿನ ಪಂದ್ಯಗಳು ಮತ್ತು (ಸೆಪ್ಟಂಬರ್ 30ರಿಂದ) 2 ಬಹುದಿನಗಳ ಪಂದ್ಯಗಳನ್ನು ಆಡಲಿದೆ.
ರಾಷ್ಟ್ರೀಯ ಆಯ್ಕೆಗಾರರೂ ಆಗಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ದೇಬಶೀಶ್ ಮೊಹಾಂತಿ ತಂಡದ ವೇಗದ ಬೌಲಿಂಗ್ ಕೋಚ್ ಆಗಿದ್ದಾರೆ. ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಆಯುಶ್ ಮ್ಹಾತ್ರೆ ತಂಡದ ನಾಯಕನಾಗಿದ್ದಾರೆ. ಶುಭದೀಪ್ ಭಟ್ಟಾಚಾರ್ಯ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದಾರೆ. ರಜಿಬ್ ದತ್ತ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದಾರೆ.
ಯೆರೆ ಗೌಡ, 2024-25ರ ಋತುವಿನಲ್ಲಿ ಕರ್ನಾಟಕ ತಂಡದ ಪ್ರಧಾನ ಕೋಚ್ ಆಗಿದ್ದರು. ಈ ಹಿಂದೆಯೂ ಅವರು ನಾಲ್ಕು ವರ್ಷ ಕರ್ನಾಟಕ ತಂಡದ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.





