ನಿಮ್ಮೊಳಗೆ ಕಚ್ಚಾಡಿಕೊಳ್ಳುತ್ತಿದ್ದೀರಿ; ಮಾಜಿ ಕ್ರಿಕೆಟಿಗರ ಮೇಲೆ ಬಾಬರ್ ಅಝಂ ಕಿಡಿ

Photo: x.com/MominSyed21193
ಕರಾಚಿ: ಪುರುಷರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡವನ್ನು ಸೆಮಿಫೈನಲ್ ಹಂತಕ್ಕೆ ಕೊಂಡೊಯ್ಯುವಲ್ಲಿ ಸಲ್ಮಾನ್ ಅಲಿ ಅಘಾ ವಿಫಲರಾಗಿದ್ದರು. ಆದರೆ ಈ ಬಗ್ಗೆ ವಾದ-ವಿವಾದ ಇನ್ನೂ ಮುಗಿದಿಲ್ಲ ಮತ್ತು ಇದು ಮೈದಾನದಲ್ಲಿನ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೀಗ ಹಾಲಿ ಹಾಗೂ ಮಾಜಿ ಆಟಗಾರರ ನಡುವಿನ ಹಗ್ಗಜಗ್ಗಾಟ ಮುನ್ನಲೆಗೆ ಬಂದಿದ್ದು, ಶದಾಬ್ ಖಾನ್ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಕೊಲಂಬೊದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋಲು ಅನುಭವಿಸಿದ ಬಳಿಕ ಮಾಜಿ ಕ್ರಿಕೆಟಿಗರಾದ ಶಾಹಿದ್ ಆಫ್ರಿದಿ ಮತ್ತು ಮೊಹಮ್ಮದ್ ಯೂಸುಫ್ ಅವರು ಬಹಿರಂಗ ಹೇಳಿಕೆ ನೀಡಿ ಶದಾಬ್ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಆಲ್ರೌಂಡರ್, ವಿಶ್ವಕಪ್ನಲ್ಲಿ ಭಾರತ ತಂಡವನ್ನು ಸೋಲಿಸಿದ ಪಾಕಿಸ್ತಾನ ತಂಡದಲ್ಲಿ ನೀವು ಇದ್ದಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಮಾತಿನ ಚಕಮಕಿ ಮತ್ತಷ್ಟು ಉಲ್ಬಣವಾಗಿದ್ದು, ಶದಾಬ್ ಹೇಳಿಕೆಗೆ ವಿರೋಧವಾಗಿ ಮತ್ತೆ ಇಬ್ಬರು ಮಾಜಿ ಆಟಗಾರರು ಕಿಡಿ ಕಾರಿದ್ದರು. ಇದು ಪಾಕಿಸ್ತಾನ ಕ್ರಿಕೆಟ್ನ ಸ್ಪಷ್ಟ ವಿಭಜನೆಯನ್ನು ಬಹಿರಂಗಪಡಿಸಿದೆ. ಮಾಜಿ ಕ್ರಿಕೆಟಿಗರ ಟೀಕೆಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು, ಸದ್ಯ ಪಾಕಿಸ್ತಾನ ಕ್ರಿಕೆಟ್ ವ್ಯವಸ್ಥೆಯಲ್ಲಿರುವವರ ಆಕ್ರೋಶಕ್ಕೆ ಕಾರಣವಾಗಿದೆ.
ಎರಡು ತಿಂಗಳ ಬಳಿಕ ಇದೀಗ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಅಝಂ ತಂಡದ ಸಹ ಆಟಗಾರರ ನೆರವಿಗೆ ಬಂದಿದ್ದಾರೆ. ಮಾಜಿ ಹಾಗೂ ಹಾಲಿ ಆಟಗಾರರ ನಡುವೆ ಸಮತೋಲನ ಮತ್ತು ಪರಸ್ಪರ ಗೌರವ ಅಗತ್ಯ ಎಂದು ಸಲಹೆ ನೀಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕರಾಗಿರುವ ಅವರು ಶದಾಬ್ ಅವರ ಪ್ರತಿಕ್ರಿಯಿಸುವ ಹಕ್ಕನ್ನು ಬೆಂಬಲಿಸಿದ್ದಾರೆ.
"ಹಾಲಿ ಆಟಗಾರ ಸರಿಯಾಗಿ ಹೇಳಿದಾಗ ಅದರ ಬಗ್ಗೆ ಮಾತನಾಡುವುದು ಸರಿ; ಆದರೆ ಅದು ವಿಭಿನ್ನ ವಿಷಯ. ಶದಾಬ್ ಅವರ ಹೇಳಿಕೆ ಮತ್ತೆ ಬಿಸಿ ಏರಲು ಕಾರಣವಾಗಿದೆ. ಪ್ರತಿಯೊಬ್ಬರಿಗೂ ತಮ್ಮದೇ ಮಾತನಾಡುವ ವಿಧಾನ ಇರುತ್ತದೆ" ಎಂದು ಅವರು ಹೇಳಿದ್ದಾರೆ.
"ಪರಸ್ಪರ ಹೋಲಿಕೆ ಸಲ್ಲದು. ನೀವು 90ರ ದಶಕದ ಕ್ರಿಕೆಟಿಗರ ಬಗ್ಗೆ ಮಾತನಾಡುವಾಗ ಅವರು ಅನುಭವಿಗಳು, ಹೆಚ್ಚು ಕ್ರಿಕೆಟ್ ಆಡಿದ್ದಾರೆ. ನಾವು ತಪ್ಪು ಮಾಡುತ್ತಿದ್ದೇವೆ ಎಂದು ನೀವು ಭಾವಿಸಿದರೆ ಹೇಳಬಹುದು. ಆದರೆ ಕೆಲವೊಮ್ಮೆ ವೈಯಕ್ತಿಕ ದಾಳಿ ನಡೆಯುತ್ತದೆ. ಅಂಥ ಸಂದರ್ಭಗಳಲ್ಲಿ ಆಟಗಾರರು ಪ್ರತಿಕ್ರಿಯೆ ನೀಡುತ್ತಾರೆ. ಆಟಗಾರರಿಗೂ ಸ್ವಾಭಿಮಾನ ಇರುತ್ತದೆ. ಅವರನ್ನು ನೀವು ಗೌರವಿಸದಿದ್ದರೆ, ಅವರು ಕೂಡ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ" ಎಂದು ಅವರು ಹೇಳಿದ್ದಾರೆ.






