ಯುವ ಏಕದಿನ ಸರಣಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಜಯಭೇರಿ

PC: x.com/BCCI
ಬೆನೋನಿ (ದಕ್ಷಿಣ ಆಫ್ರಿಕಾ): 19ರ ವಯೋಮಿತಿಯ ಭಾರತ ಕ್ರಿಕೆಟ್ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಯುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆರು ವಿಕೆಟ್ ಗಳ ಜಯ ಸಾಧಿಸಿದೆ. ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರವಾಸಿ ತಂಡ 301 ರನ್ ಕಲೆಹಾಕಿತ್ತು. ಮಿಂಚು ಹಾಗೂ ಮಳೆಯಿಂದ ಪಂದ್ಯ ನಿಂತಾಗ ಅತಿಥೇಯ ತಂಡ 27.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು. ಪಂದ್ಯ ಪುನರಾರಂಭವಾಗದ ಹಿನ್ನೆಲೆಯಲ್ಲಿ ಡಿಎಲ್ಎಸ್ ವಿಧಾನದಲ್ಲಿ ಭಾರತವನ್ನು 25 ರನ್ ಅಂತರದಿಂದ ವಿಜೇತರೆಂದು ನಿರ್ಧರಿಸಲಾಯಿತು.
ಇದಕ್ಕೂ ಮನ್ನ ಆರ್.ಎಸ್.ಅಂಬರೀಶ್ ಮತ್ತು ಹರವಂಶ ಪಂಗಾಲಿಯಾ ಅವರು ಐದನೇ ವಿಕೆಟ್ ಗೆ ಕಲೆಹಾಕಿದ 140 ರನ್ ಗಳ ಭರ್ಜರಿ ಜತೆಯಾಟದಿಂದ ಭಾರತ ಯುವ ತಂಡ 301 ರನ್ ಕಲೆಹಾಕಿತ್ತು. ವೈಭವ್ ಸೂರ್ಯವಂಶಿ ಮತ್ತು ಅರೋನ್ ಜಾರ್ಜ್ ಅವರಿಂದ ಗಮನಾರ್ಹ ಪ್ರದರ್ಶನ ಕಂಡುಬರಲಿಲ್ಲ. ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ ಭಾರತ 67 ರನ್ ಗಳೊಂದಿಗೆ ಕುಂಟುತ್ತಿದ್ದಾಗ ಐದನೇ ವಿಕೆಟ್ ಗೆ ಪಂಗಾಲಿಯಾ- ಅಂಬರೀಶ್ ಜೋಡಿ ಅದ್ಭುತ ಪ್ರದರ್ಶನ ನೀಡಿತು. ಅಂಬರೀಶ್ 65 ರನ್ ಗಳಿಸಿದರೆ ಹರವಂಶ 93 ರನ್ ಸಿಡಿಸಿದರು.
ಗಾಯದ ಕಾರಣದಿಂದ ನಾಯಕ ಆಯುಷ್ ಮಾಟ್ರೆ ಮತ್ತು ಉಪನಾಯಕ ವಿಹಾನ್ ಮಲ್ಹೋತ್ರಾ ಅವರ ಅನುಪಸ್ಥಿತಿಯಲ್ಲಿ ವೈಭವ್ ಸೂರ್ಯವಂಶಿ ತಂಡವನ್ನು ಮುನ್ನಡೆಸಿದರು. ದಕ್ಷಿಣ ಆಫ್ರಿಕಾ ನಾಯಕ ಮೊಹ್ಮದ್ ಬುಲ್ಬುಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಗೆ ಎದುರಾಳಿಗಳನ್ನು ಆಹ್ವಾನಿಸಿದರು.







