ಯೂತ್ ಒಲಿಂಪಿಕ್ಸ್: ಬೆಳ್ಳಿ ಜಯಿಸಿ ಇತಿಹಾಸ ನಿರ್ಮಿಸಿದ ತನ್ವಿ ಪತ್ರಿ

ತನ್ವಿ ಪತ್ರಿ | Photo Credit : newsonair.gov.in
ಡಾಕರ್ (ಸೆನೆಗಲ್), ನ. 6: ಸೆನೆಗಲ್ನ ಡಾಕರ್ ನಲ್ಲಿ ಗುರುವಾರ ರಾತ್ರಿ ನಡೆದ 2026ರ ಯೂತ್ ಒಲಿಂಪಿಕ್ ಗೇಮ್ಸ್ನ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಚೀನಾದ ಹಾಲಿ ವಿಶ್ವ ಜೂನಿಯರ್ ಚಾಂಪಿಯನ್ ಝಾಂಗ್ ಯಿ ಕ್ಸಿನ್ ವಿರುದ್ಧ ಸೋತಿರುವ ಭಾರತದ ತನ್ವಿ ಪತ್ರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ತನ್ವಿ ಯೂತ್ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ನಲ್ಲಿ ಪದಕ ಗೆದ್ದಿರುವ ಭಾರತದ ಮೊದಲ ಮಹಿಳಾ ಶಟ್ಲರ್ ಎಂಬ ಹಿರಿಮೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದ್ದಾರೆ.
ಒಂದು ಗಂಟೆ 22 ನಿಮಿಷಗಳ ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ಮೊದಲ ಗೇಮ್ ಗೆದ್ದುಕೊಂಡು, ಮೂರನೇ ಗೇಮ್ನಲ್ಲಿ ಪುಟಿದೆದ್ದರೂ 15ರ ವಯಸ್ಸಿನ ತನ್ವಿ ಅವರು ಚೀನಾದ ಆಟಗಾರ್ತಿಯ ವಿರುದ್ಧ 21-15, 13-21, 24-26 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಭಾರತೀಯ ಶಟ್ಲರ್ ಮೊದಲ ಗೇಮ್ ನಲ್ಲಿ ಸತತ ಏಳು ಅಂಕ ಗಳಿಸಿ 10-5 ಮುನ್ನಡೆ ಪಡೆದರು. ಮೊದಲ ಗೇಮ್ ಅನ್ನು 25 ನಿಮಿಷಗಳಲ್ಲಿ 21-15ರಿಂದ ಗೆದ್ದುಕೊಂಡರು.
4-0 ಮುನ್ನಡೆಯೊಂದಿಗೆ ಎರಡನೇ ಗೇಮ್ ಅನ್ನು ತನ್ವಿ ಆರಂಭಿಸಿದರು. ಮಧ್ಯಂತರದ ನಂತರ ಝಾಂಗ್ ಸ್ಪರ್ಧೆಯಲ್ಲಿ ಹಿಡಿತ ಸಾಧಿಸಿದರು. ಎರಡನೇ ಗೇಮ್ ಅನ್ನು 21-13 ಅಂತರದಿಂದ ಜಯಿಸಿದ ಝಾಂಗ್ ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.
ಮೂರನೇ ಗೇಮ್ ನಲ್ಲಿ ಝಾಂಗ್ 19-10ರಿಂದ ಮುನ್ನಡೆ ಪಡೆದರು. ತನ್ವಿ ನಾಲ್ಕು ಅಂಕ ಗಳಿಸಿ ಹಿನ್ನಡೆಯನ್ನು 19-15ಕ್ಕೆ ಇಳಿಸಿದರು. ಆದರೆ, ಭಾರತೀಯ ಶಟ್ಲರ್ ಎಸಗಿದ ತಪ್ಪಿನ ಲಾಭ ಪಡೆದ ಝಾಂಗ್ ಐದು ಅಂಕ ಗಳಿಸಿ ಮೇಲುಗೈ ಸಾಧಿಸಿದರು. ಮೂರನೇ ಗೇಮ್ ಅನ್ನು 26-24 ಅಂತರದಿಂದ ಗೆದ್ದುಕೊಂಡರು.
ತನ್ವಿ ಮೂರು ಅವಕಾಶಗಳನ್ನು ಪಡೆದಿದ್ದರೂ ಚಿನ್ನದ ಪದಕ ಕೈಗೆಟುಕಲಿಲ್ಲ. ಝಾಂಗ್ ತಮ್ಮ ಅನುಭವದ ಬಲದಿಂದ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ತನ್ವಿ ಸೆಮಿಫೈನಲ್ನಲ್ಲಿ ಜಪಾನ್ನ ಯುಝುನೊ ವಟನಬೆ ಅವರನ್ನು 21-14, 11-21, 21-19 ಗೇಮ್ಗಳಿಂದ ಮಣಿಸಿದ್ದರು.
ಈ ಹಿಂದೆ ಯೂತ್ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ನ ಪುರುಷರ ಸಿಂಗಲ್ಸ್ ನಲ್ಲಿ ಎಚ್.ಎಸ್. ಪ್ರಣಯ್ (2010) ಹಾಗೂ ಲಕ್ಷ್ಯ ಸೇನ್ (2018) ಬೆಳ್ಳಿ ಪದಕಗಳನ್ನು ಜಯಿಸಿದ್ದರು.
ಲಕ್ಷ್ಯ ಸೇನ್ 2018ರಲ್ಲಿ ಬ್ಯುನಸ್ ಐರಿಸ್ನಲ್ಲಿ ರನ್ನರ್ ಅಪ್ ಎನಿಸಿಕೊಂಡಿದ್ದರೆ, ಪ್ರಣಯ್ 2010ರಲ್ಲಿ ಸಿಂಗಾಪುರದಲ್ಲಿ ಚಿನ್ನದ ಪದಕದಿಂದ ವಂಚಿತರಾಗಿದ್ದರು.
‘‘ನನಗೆ ನಿಜವಾಗಿಯೂ ವಿಶೇಷ ಅನುಭವವಾಗುತ್ತಿದೆ. ಭವಿಷ್ಯದ ಟೂರ್ನಿಗಳಲ್ಲಿ ಇನ್ನಷ್ಟು ಉತ್ತಮವಾಗಿ ಆಡಲು ಇದು ನನಗೆ ಆತ್ಮವಿಶ್ವಾಸ ತುಂಬುವ ವಿಶ್ವಾಸವಿದೆ. ಫೈನಲ್ನಲ್ಲಿ ಉತ್ತಮವಾಗಿ ಆಡುವ ವಿಶ್ವಾಸ ನನಗಿತ್ತು’’ ಎಂದು ತನ್ವಿ ಹೇಳಿದ್ದಾರೆ.
ಯೂತ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಭಾರತದ ಇನ್ನೋರ್ವ ಬ್ಯಾಡ್ಮಿಂಟನ್ ಆಟಗಾರ ದೇವ್ ರೂಪರೆಲಿಯಾ ಅವರು ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಸೋತು ನಿರ್ಗಮಿಸಿದರು. ದೇವ್ ಹಾಂಗ್ಕಾಂಗ್ ಚೀನಾದ ಹಾಂಗ್ ಟಿಯಾನ್ ವಿರುದ್ಧ 22-24, 10-21 ಅಂತರದಿಂದ ಸೋತಿದ್ದಾರೆ.
ಡಾಕರ್ ಯೂತ್ ಒಲಿಂಪಿಕ್ ಗೇಮ್ಸ್ ನಲ್ಲಿ ಭಾರತ ತಂಡವು ನಾಲ್ಕನೇ ಪದಕ ಜಯಿಸಿದೆ. ಭಾರತವು ತಲಾ ಎರಡು ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಜಯಿಸಿದೆ.
ರಾಜ್ಕುಮಾರಿ ಚಾನು ವುಶು ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರೆ, ಖುಷ್ಬು ರಜಕ್ಭಾಯ್ ಜೂಡೋದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಬೆಂಗಳೂರಿನ ಧಿನಿಧಿ ದೇಸಿಂಘು ಈಜಿನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
►ತನ್ವಿ ಪತ್ರಿ ಬ್ಯಾಡ್ಮಿಂಟನ್ ಸಾಧನೆಗಳು
ತನ್ವಿ ಚೀನಾದಲ್ಲಿ ಬ್ಯಾಡ್ಮಿಂಟನ್ನ ಆರಂಭಿಕ ಪಾಠಗಳನ್ನು ಕಲಿತರು. ತನ್ವಿ ಅವರ ತಂದೆ ಶಾಂಘೈನ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆರನೇ ವಯಸ್ಸಿನಲ್ಲಿ ತನ್ವಿ ಬ್ಯಾಡ್ಮಿಂಟನ್ನತ್ತ ಒಲವು ತೋರಿದರು.
ತನ್ವಿ ಈಗಾಗಲೇ ಭಾರತದ ಭರವಸೆಯ ಯುವ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಲಿ ಏಶ್ಯನ್ ಅಂಡರ್-17 ಚಾಂಪಿಯನ್ ಆಗಿರುವ ತನ್ವಿ ಅವರು 2024ರಲ್ಲಿ ಏಶ್ಯನ್ ಅಂಡರ್-15 ಪ್ರಶಸ್ತಿಯನ್ನು ಗೆದ್ದಿದ್ದರು.
ತನ್ವಿ ಬೆಂಗಳೂರಿನಲ್ಲಿರುವ ಬ್ಯಾಡ್ಮಿಂಟನ್ ಎಕ್ಸೆಲೆನ್ಸ್ ಸೆಂಟರ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.






