ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ವಿಭಾಗಕ್ಕೆ ಯುವರಾಜ್ ಸಿಂಗ್ ಸೇರ್ಪಡೆ

Photo Credit : PTI
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮುಂಬರುವ ಐಪಿಎಲ್ಗಿಂತ ಮೊದಲು ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಫ್ರಾಂಚೈಸಿಯ ಸಹ ಮಾಲಕರಾದ ಜೆಎಸ್ಡಬ್ಲ್ಯು ಹಾಗೂ ಜಿಎಂಆರ್ ಈ ಆಯ್ಕೆಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.
304 ಏಕದಿನ, 40 ಟೆಸ್ಟ್ ಹಾಗೂ 58 ಟಿ-20 ಪಂದ್ಯಗಳನ್ನು ಆಡಿರುವ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್, ಭಾರತ ತಂಡವು 2007ರ ಐಸಿಸಿ ಟಿ-20 ವಿಶ್ವಕಪ್ ಹಾಗೂ 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 44ರ ವಯಸ್ಸಿನ ಯುವರಾಜ್ ಇತ್ತೀಚೆಗಿನ ದಿನಗಳಲ್ಲಿ ಹಲವಾರು ಉದಯೋನ್ಮುಖ ಭಾರತೀಯ ಕ್ರಿಕೆಟಿಗರಿಗೆ ಸಲಹೆಗಾರನಾಗಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮೊದಲ ಬಾರಿ ಐಪಿಎಲ್ನಲ್ಲಿ ತರಬೇತುದಾರರಾಗಿ ಕೆಲಸ ಮಾಡಲಿದ್ದಾರೆ.
ಈ ನೇಮಕದ ಮೂಲಕ ಯುವರಾಜ್ ಮತ್ತೊಮ್ಮೆ ಡೆಲ್ಲಿ ಫ್ರಾಂಚೈಸಿಗೆ ಸೇರ್ಪಡೆಯಾದರು. 2015ರಲ್ಲಿ ಡೆಲ್ಲಿ ತಂಡವು ದಾಖಲೆಯ 16 ಕೋ.ರೂ.ಗೆ ಯುವರಾಜ್ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆಗ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆ ಋತುವಿನಲ್ಲಿ ಎಲ್ಲ 14 ಪಂದ್ಯಗಳಲ್ಲಿ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು.
ಹೊಸ ಹುದ್ದೆ ವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದಿರುವ ಯುವರಾಜ್, ಫ್ರಾಂಚೈಸಿ ಹಾಗೂ ಅದರ ಮಾಲಕರುಗಳೊಂದಿಗೆ ನಂಟು ಅವಕಾಶದ ವಿಶೇಷ ಭಾಗವಾಗಿದೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ ಎಂದರು.
ಯುವರಾಜ್ ಐಪಿಎಲ್ ವೃತ್ತಿಜೀವನದಲ್ಲಿ 132 ಪಂದ್ಯಗಳನ್ನು ಆಡಿದ್ದು 2,750 ರನ್ ಗಳಿಸಿ, 36 ವಿಕೆಟ್ಗಳನ್ನು ಪಡೆದಿದ್ದರು.






