T20 ವಿಶ್ವಕಪ್ | ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಝಿಂಬಾಬ್ವೆಗೆ ಐತಿಹಾಸಿಕ ಗೆಲುವು

Photo credit: PTI
ಕೊಲಂಬೊ: 19 ವರ್ಷಗಳ ಬಳಿಕ ಜಾಗತಿಕ ಕ್ರಿಕೆಟ್ ವೇದಿಕೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಝಿಂಬಾಬ್ವೆ ತಂಡ ಐತಿಹಾಸಿಕ ಜಯ ಸಾಧಿಸಿದೆ. ರೋಚಕ ಹೋರಾಟ ಕಂಡ ಪಂದ್ಯದಲ್ಲಿ ಝಿಂಬಾಬ್ವೆ 23 ರನ್ಗಳಿಂದ ಗೆದ್ದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಝಿಂಬಾಬ್ವೆ ನಿಗದಿತ ಓವರ್ಗಳಲ್ಲಿ 2 ವಿಕೆಟ್ಗಳಿಗೆ 169 ರನ್ಗಳ ಮೊತ್ತ ಕಲೆಹಾಕಿತು. ಆರಂಭದಿಂದಲೇ ಶಿಸ್ತಿನ ಆಟ ಪ್ರದರ್ಶಿಸಿದ ಬ್ಯಾಟರ್ ಗಳು ರಕ್ಷಣಾತ್ಮಕ ಆಟವಾಡಿ ತಂಡಕ್ಕೆ ಭದ್ರ ಇನ್ನಿಂಗ್ಸ್ ಕಟ್ಟಿದರು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಕುಸಿತ ಕಂಡು 146 ರನ್ಗಳಿಗೆ ಆಲೌಟ್ ಆಯಿತು. ಝಿಂಬಾಬ್ವೆ ಬೌಲರ್ಗಳ ದಾಳಿಗೆ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕ ತತ್ತರಿಸಿತು. ಬ್ಲೆಸ್ಸಿಂಗ್ ಮುಜರಬಾನಿ ಹಾಗೂ ಬ್ರಾಡ್ ಇವಾನ್ಸ್ ಜೋಡಿ ಒಟ್ಟಾಗಿ 7 ವಿಕೆಟ್ ಗಳನ್ನು ಕಬಳಿಸಿ ಪಂದ್ಯವನ್ನು ಝಿಂಬಾಬ್ವೆ ಪರ ತಿರುಗಿಸಿದರು.
ಮ್ಯಾಕ್ಸ್ವೆಲ್ ಮತ್ತು ರೆನ್ಶಾ ನಡುವಿನ ಜೊತೆಯಾಟ ಹೊರತುಪಡಿಸಿದರೆ ಆಸ್ಟ್ರೇಲಿಯಾ ಯಾವುದೇ ಹಂತದಲ್ಲೂ ಹೋರಾಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ನಲ್ಲಿ ಮ್ಯಾಥ್ಯೂ ಕುಹ್ನೆಮನ್ ರನೌಟ್ ಆಗುತ್ತಿದ್ದಂತೆ ಪಂದ್ಯಕ್ಕೆ ತೆರೆ ಬಿತ್ತು.
2007ರ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಝಿಂಬಾಬ್ವೆ ದಾಖಲಿಸಿದ ಮೊದಲ ಜಯ ಇದಾಗಿದ್ದು, ಈ ಗೆಲುವಿನಿಂದ ಗ್ರೂಪ್ ‘ಸಿ’ಯ ಸ್ಪರ್ಧೆ ಮತ್ತಷ್ಟು ರೋಚಕಗೊಂಡಿದೆ.




